ಲ್ಯಾಪ್​ಟಾಪ್​, ಡೈರಿ... ಐಬಿ ಅಧಿಕಾರಿ ಸಾವಿಗೆ ಕಾರಣನಾದ ಆರೋಪಿ ಕಣ್ಮರೆ! ಖಾಕಿಗೆ ಸಿಕ್ಕಿತು ಸುಳಿವು | IB Officer Death

ವಿಜಯವಾಣಿ - 2025-04-07T190813.158
Published on

IB Officer Death: ಮಾ.24ರಂದು ಶವವಾಗಿ ಪತ್ತೆಯಾದ ಕೇರಳದ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಮೇಘಾ ಮಧುಸೂದನನ್ (24), ರೈಲ್ವೆ ಹಳಿ ಪಕ್ಕ ಮೃತಪಟ್ಟ ಸುದ್ದಿ ಸಂಬಂಧಿಕರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಮಗಳ ಸಾವಿನ ಹಿಂದಿರುವ ಸಹೋದ್ಯೋಗಿ, ಪ್ರೇಮಿ ಕೈವಾಡವನ್ನು ತನಿಖೆ ಮೂಲಕ ಬಯಲಿಗೆಳೆಯಬೇಕು ಮತ್ತು ಸಾವಿನ ಸುತ್ತಲಿನ ಸಂದರ್ಭಗಳನ್ನು ಇಂಚಿಂಚಾಗಿ ಬಹಿರಂಗಪಡಿಸಲು ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಅಂತೆಯೇ ಚುರುಕು ತನಿಖೆ ಕೈಗೊಂಡಿರುವ ಖಾಕಿ ಪಡೆ, ಆರೋಪಿಯ ನಿವಾಸದ ಮೇಲೆ ದಾಳಿ ನಡೆಸಿದೆ.

ಮೇಘಾ ದುರಂತ ಸಾವಿಗೆ ಕಾರಣನಾಗಿರುವ ಆರೋಪಿ ಸುಕಾಂತ್ ಸದ್ಯ ಪೊಲೀಸರಿಂದ ತಲೆಮರಿಸಿಕೊಂಡಿದ್ದಾನೆ. ಸುಕಾಂತ್​ ಬಂಧನಕ್ಕಾಗಿ ತೀವ್ರ ಶೋಧಿಸುತ್ತಿರುವ ಖಾಕಿ ಪಡೆ, ಆತನ ನಿವಾಸದ ಮೇಲೆ ದಾಳಿ ನಡೆಸಿ, ಆರೋಪಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಭಾನುವಾರ (ಏ.06) ರಾತ್ರಿ ಕೇರಳದ ಮಲ್ಲಪುರಂನಲ್ಲಿರುವ ಸುಕಾಂತ್ ಉಳಿದುಕೊಂಡಿದ್ದ ಮನೆಯನ್ನು ರೇಡ್​ ಮಾಡಿದ ಪೊಲೀಸರು, ಆತ ಬಳಸುತ್ತಿದ್ದ ಲ್ಯಾಪ್​ಟಾಪ್​, ಮೊಬೈಲ್ ಫೋನ್​, ಡೈರಿ ಮತ್ತು ಪ್ರಯಾಣಿಸಿದ ಊರಿನ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಕೆಲವು ದಾಖಲೆಗಳಲ್ಲಿ ಸುಕಾಂತ್ ಮೃತ ಐಬಿ ಅಧಿಕಾರಿ ಮೇಘಾ ಜತೆಗೆ ಹಲವಾರು ಸ್ಥಳಗಳಿಗೆ ಪ್ರಯಾಣಿಸಿರುವುದು ಸ್ಪಷ್ಟವಾಗಿದೆ. ಸುಕಾಂತ್ ಲ್ಯಾಪ್​ಟಾಪ್​ ಮತ್ತು ಇತರೆ ವಸ್ತುಗಳಿಂದ ಮಾಡಿರುವ ಚಾಟ್ ಲಾಗ್‌ ಮತ್ತು ಫೈಲ್‌ಗಳು ಪ್ರಕರಣದ ಅಸಲಿಯತ್ತನ್ನು ಬೇಧಿಸಲು ಪೊಲೀಸರ ತನಿಖೆಗೆ ಸಹಾಯ ಮಾಡಬಹುದು ಎಂದು ಹೇಳಲಾಗಿದೆ.

ಏನಿದು ಪ್ರಕರಣ?

ದುಡಿದ ಪ್ರತಿ ತಿಂಗಳ ಸಂಬಳವನ್ನು ತನ್ನ ಸಹೋದ್ಯೋಗಿಯಾದ ಆರೋಪಿ ಸುಕಾಂತ್ ಬ್ಯಾಂಕ್​ ಖಾತೆಗೆ ವರ್ಗಾಯಿಸುತ್ತಿದ್ದ ಮೇಘಾ, ತನಗಾಗಿ ಎಂದು ಕೇವಲ 100 ರೂ. ಕೂಡ ಇಟ್ಟುಕೊಳ್ಳುತ್ತಿರಲಿಲ್ಲ ಎಂಬ ಸಂಗತಿ ದುರಂತ. ಪ್ರಿಯಕರನ ಮಾನಸಿಕ ಹಿಂಸೆ, ಆಮಿಷಗಳಿಗೆ ಸಿಲುಕಿದ್ದ ಮೇಘಾ, ಈ ವಿಷಯದಲ್ಲಿ ಯಾರ ಸಹಾಯವನ್ನೂ ಪಡೆಯದೆ, ಯಾರೊಂದಿಗೂ ಹೆಚ್ಚು ಪ್ರಸ್ತಾಪಿಸದೆ ಇದ್ದದ್ದು ಆಕೆಯ ದುರಂತ ಅಂತ್ಯಕ್ಕೆ ಕಾರಣ ಎಂದು ಹೇಳಲಾಗಿದೆ.

ಮಗಳ ಅಗಲಿಕೆ ನೆನೆದು ಭಾವುಕರಾದ ಪೋಷಕರು, “ಬಾಲ್ಯದಿಂದಲೂ ಅವಳ ಮನಸ್ಥಿತಿ ಉಳಿತಾಯದ ಹಾದಿಯನ್ನೇ ಅವಲಂಬಿಸಿತ್ತು. ಹಣ ಉಳಿಸುವ ಹಂಬಲದಲ್ಲಿ ಕುಡಿಕೆಯಲ್ಲಿ ಹಣ ಕೂಡಿಡುತ್ತಿದ್ದಳು” ಎಂದಿದ್ದಾರೆ. “ಕುಡಿಕೆ ತುಂಬಿದ ಮರುದಿನವೇ ಅದರಲ್ಲಿನ ಹಣ ತೆಗೆದು, ಅದನ್ನು ಅವರ ತಂದೆ ಇಲ್ಲವೇ ನನ್ನ ಬಳಿ ನೀಡುತ್ತಿದ್ದಳು. ಅನಗತ್ಯ ಖರ್ಚು ಮಾಡುತ್ತಿರಲಿಲ್ಲ. ಪ್ರತಿದಿನ ಬೆಳಗ್ಗೆ ನನ್ನೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಳು. ಅವಳು ಸಾಯುವ ದಿನ ನಾನು ಕರೆ ಮಾಡಿದ್ದೆ. ಆಗ ನನಗೆ ತಡವಾಯಿತು, ಕೆಲವು ಸಮಯದ ನಂತರ ಫೋನ್ ಮಾಡ್ತೀನಿ ಎಂದಳು. ಆದರೆ, ಅದೇ ಅವಳೊಂದಿಗೆ ನಾನು ಮಾತನಾಡುವ ಕೊನೆಯ ಮಾತು ಎಂಬುದು ನನಗೆ ಗೊತ್ತಿರಲಿಲ್ಲ. ಆತ ನನ್ನ ಮಗಳಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಆಕೆಯ ಮೇಲೆ ಆರ್ಥಿಕ ಒತ್ತಡ ಹೇರಿದ್ದಾನೆ” ಎಂದು ಮೇಘಾ ತಾಯಿ ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net