

ವಿಜಯವಾಣಿ ಸುದ್ದಿಜಾಲ ಉಡುಪಿ
ಈ ಬಾರಿಯ ಗಣೇಶೋತ್ಸವವನ್ನು ಅತ್ಯಂತ ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಸಹಕರಿಸಬೇಕು. ಯಾವುದೇ ರೀತಿಯ ಸಭೆ, ಕಾರ್ಯಕ್ರಮ ಆಯೋಜಿಸುವುದಿದ್ದರೂ ಅದರ ರೂಪು-ರೇಷೆಯ ಮಾಹಿತಿ ನೀಡಿ ಸ್ಥಳೀಯ ಪೊಲೀಸ್ ಠಾಣೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಳ್ಳಲೇಬೇಕು. ಒಟ್ಟಾರೆಯಾಗಿ ಗಣೇಶೋತ್ಸವಗಳು ಧಾರ್ಮಿಕ ಭಾವನೆಗೆ ಪೂರಕವಾಗಿ ಮಾತ್ರ ಆಚರಿಸುವಂತೆ ಇರಬೇಕು ಎಂದು ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಸೂಚನೆ ನೀಡಿದರು.
ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ಪೊಲೀಸ್ ಉಪವಿಭಾಗದ ವತಿಯಿಂದ ವಿವಿಧ ಠಾಣಾ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಬ್ಯಾನರ್ ಹಾಗೂ ಬಂಟಿಂಗ್ಸ್ ಮಾಲೀಕರು, ಡಿಜೆ ಮತ್ತು ಸೌಂಡ್ ಸಿಸ್ಟಮ್ ಮಾಲೀಕರೊಂದಿಗೆ ಆಗಸ್ಟ್ 24ರಂದು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಗಣಪತಿ ವಿಸರ್ಜನೆಯ ಮೆರವಣಿಗೆ ತೆರಳುವ ಮಾರ್ಗದ ಮಾಹಿತಿಯನ್ನು ಗಣೇಶೋತ್ಸವದ ಆರಂಭದ ಮೊದಲೇ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಡಿಜೆ ಬಳಕೆಗೆ ಅವಕಾಶವಿಲ್ಲ. ಗಣಪತಿ ವಿಸರ್ಜನೆ ಸಮಯದಲ್ಲಿ ಈಜುಗಾರರನ್ನು ಮಾತ್ರ ಕೆರೆ, ನದಿ, ಪುಷ್ಕರಣಿ ಅಥವಾ ಸಮುದ್ರಕ್ಕೆ ಇಳಿಸಬೇಕು. ಸಭಾ ಕಾರ್ಯಕ್ರಮಗಳಲ್ಲಿ ಭಾಷಣಕಾರರನ್ನು ಕರೆಸುವ ಮೊದಲೇ ಅವರ ಮಾಹಿತಿ ನೀಡಿ ಅನುಮತಿ ಪಡೆಯಲೇಬೇಕು. ಒಟ್ಟಿನಲ್ಲಿ ಧಾರ್ಮಿಕ ಆಚರಣೆಗೆ ಒತ್ತು ನೀಡಲು ಎಲ್ಲ ಮಂಡಳಿಗಳೂ ಪೊಲೀಸ್ಇ ಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಬಡಿಗೇರ, ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ಉಡುಪಿ ನಗರ ಠಾಣೆ, ಮಣಿಪಾಲ, ಹಿರಿಯಡ್ಕ, ಮಲ್ಪೆ, ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯ ವಿವಿಧ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.