

ಬೆಂಗಳೂರು: ಅರಮನೆ ಮೈದಾನದ ಟೆನಿಸ್ ಪೆವಿಲಿಯನ್ನಲ್ಲಿ ತಾತ್ಕಾಲಿಕ ಶೆಡ್ಗಳು ಶುಕ್ರವಾರ ಭಾರಿ ಮಳೆಯಿಂದಾಗಿ ಕುಸಿದುಬಿದ್ದು ಅದರಲ್ಲಿದ್ದ ವಲಸೆ ಕಾರ್ವಿುಕರು ಸಂಕಷ್ಟಕ್ಕಿಡಾಗಿದ್ದಾಗ ಪ್ರಾಣದ ಹಂಗು ತೊರೆದು ರಕ್ಷಿಸಿದ ನಗರದ ಪೊಲೀಸ್ ಕಾನ್ಸ್ಟೆಬಲ್ ಅಕ್ಷರಶಃ ‘ಕರೊನಾ ವಾರಿಯರ್’ ಎನಿಸಿದ್ದಾರೆ.
200ಕ್ಕೂ ಅಧಿಕ ಮಂದಿ ಶೆಡ್ನಲ್ಲಿದ್ದರು. ಶೆಡ್ ಬಿದ್ದ ಸಂದರ್ಭದಲ್ಲಿ ಮಕ್ಕಳು ಚೀರಾಡುತ್ತಿದ್ದರು. ಕೂಡಲೇ ಶೆಡ್ನೊಳಗೆ ಸಿಲುಕಿದ್ದ ವರನ್ನು ಹೊರತಂದು ಬೇರೆಡೆ ಸ್ಥಳಾಂತ ರಿಸಿದೆ. ಮುಂದೆ ಸಬ್ ಇನ್ಸ್ಪೆಕ್ಟರ್ ಆಗಬೇಕು ಎಂಬ ಕನಸು ಕಂಡಿದ್ದೇನೆ. | ರವಿಕುಮಾರ್ ಕಾನ್ಸ್ಟೆಬಲ್
ಕರೊನಾ ಸೋಂಕು ಹಿನ್ನೆಲೆಯಲ್ಲಿ ಅರಮನೆ ಮೈದಾನದ ತಾತ್ಕಾಲಿಕ ಶೆಡ್ಗಳಲ್ಲಿ ಕಾರ್ವಿುಕರಿಗೆ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಶಿವಾಜಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿರುವ ರವಿಕುಮಾರ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಶುಕ್ರವಾರ (ಮೇ 29) ಸಂಜೆ ಸುರಿದಿದ್ದ ಭಾರಿ ಮಳೆಗೆ ಕಾರ್ವಿುಕರಿದ್ದ ಶೆಡ್ಗಳು ಕುಸಿದಿದ್ದವು. ಆ ಶೆಡ್ನೊಳಗೆ ಸಿಲುಕಿದ್ದ ಹಲವು ಮಂದಿ ಹೊರಬರಲಾಗದೆ ಕೂಗಾಡುತ್ತಿದ್ದರು. ಆಗ ಸಮಯಪ್ರಜ್ಞೆ ತೋರಿದ ರವಿಕುಮಾರ್, ಶೆಡ್ನೊಳಗೆ ನುಗ್ಗಿ ಮಗು ರಕ್ಷಿಸಿದರು. ಸಾಮಾನು ಸರಂಜಾಮು ತೆಗೆದುಕೊಳ್ಳಲು ಶೆಡ್ನೊಳಗೆ ಹೋಗುತ್ತಿದ್ದವರನ್ನು ತಡೆದು ಬೇರೊಂದು ಕಡೆ ಸ್ಥಳಾಂತರಿಸಿದರು. ಶೆಡ್ನಡಿ ಸಿಲುಕಿದ್ದ ಹಲವರನ್ನು ಹೊರಗೆ ತಂದು ರಕ್ಷಣೆ ಮಾಡಿದ್ದರು.
ಆಯುಕ್ತರಿಂದ ಸನ್ಮಾನ: ರವಿಕುಮಾರ್ ಸೇವೆ ಪರಿಗಣಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಸನ್ಮಾನಿಸಿದರು. ಠಾಣೆಯ ಆವರಣದಲ್ಲಿ ಭಾನುವಾರ ಸನ್ಮಾನಿಸಿ, ಪ್ರಶಸ್ತಿ ಪತ್ರದೊಂದಿಗೆ 10 ಸಾವಿರ ರೂ. ನಗದು ಬಹುಮಾನ ವಿತರಿಸಿದರು. ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್, ಡಿಸಿಪಿ ಡಾ. ಶರಣಪ್ಪ ಮತ್ತಿತರರಿದ್ದರು.
ಎಂಬಿಎಯಲ್ಲಿ ಚಿನ್ನದ ಪದಕ: ದಾವಣಗೆರೆ ಜಿಲ್ಲೆಯ ರವಿಕುಮಾರ್, ಕುವೆಂಪು ವಿವಿಯಲ್ಲಿ 2016ರಲ್ಲಿ ಎಂಬಿಎ ಪದವಿಯನ್ನು ಮೊದಲ ರ್ಯಾಂಕ್ನಲ್ಲಿ ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ನಂತರ ಕುವೆಂಪು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ 2 ವರ್ಷ ಸೇವೆ ಸಲ್ಲಿಸಿದ್ದರು. 2019ರಲ್ಲಿ ಬೆಂಗಳೂರು ನಗರ ಪೊಲೀಸ್ ಕಾನ್ಸ್ಟೆಬಲ್ ಆಗಿ ನೇಮಕಗೊಂಡಿದ್ದಾರೆ.