'ಮನರಂಜನೆ ಬೇಕೆನಿಸಿದ್ರೆ ಹೋಗಿ ರೇಪ್​ ಮಾಡಿ': ಸಿಎಂ ಮಮತಾ ವಿರುದ್ಧ ಆರೋಪ, ಬಿಜೆಪಿ ನಾಯಕಿಗೆ ಶಾಕ್​!

Agnimitra
Published on

ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಗ್ನಿಮಿತ್ರ ಪೌಲ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಪೂರ್ವ ಮಿದ್ನಾಪೋರ್​ ಜಿಲ್ಲೆಯ ತಮ್ಲುಕು ಪೊಲೀಸ್​ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದ್ದು, ಈ ಬಗ್ಗೆ ವಿಚಾರಿಸುತ್ತಿದ್ದೇವೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಅಗ್ನಿಮಿತ್ರ ಪೌಲ್​ ಆರೋಪವೇನು?

ನ. 24ರಂದು ಪೂರ್ವ ಮಿದ್ನಾಪೋರ್​ ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅಗ್ನಿಮಿತ್ರ ಮಾತನಾಡಿ, ರಾಜ್ಯದಲ್ಲಿ ಪ್ರತಿದಿನವೂ ಅತ್ಯಾಚಾರಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಮಾಲ್ಡಾದಲ್ಲಿ 6 ವರ್ಷದ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯಿತು. ಯಾರು ಈ ಅತ್ಯಾಚಾರಗಳನ್ನು ಮಾಡುತ್ತಿದ್ದಾರೆಂಬುದು ನಿಮಗೆ ಗೊತ್ತಾ ? ಬಹುತೇಕ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕಾರ್ಯಕರ್ತರು ಮತ್ತು ಬೆಂಬಲಿಗರಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದುವರಿದು ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದ ಅಗ್ನಿಮಿತ್ರ ಇದಕ್ಕೆಲ್ಲಾ ಕಾರಣ ಸಿಎಂ ಮಮತಾ ಬ್ಯಾನರ್ಜಿ. ನಾನು ನಿಮಗೆ ಕೆಲಸ ಕೊಡಲು ವಿಫಲವಾಗಿದ್ದೇನೆ. ನಿಮಗೆ ಮನರಂಜನೆ ಬೇಕೆನಿಸಿದರೆ ಹೋಗಿ ಅತ್ಯಾಚಾರ ಮಾಡಿ. ಪರಿಹಾರ ನೀಡುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುತ್ತೇನೆಂದು ಮಮತಾ ತನ್ನ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಹೇಳಿದ್ದಾರೆಂದು ಅಗ್ನಿಮಿತ್ರ ಬಹಳ ಗಂಭೀರವಾದ ಆರೋಪವನ್ನೇ ಮಾಡಿದ್ದಾರೆ.

ಇನ್ನು ಅಗ್ನಿಮಿತ್ರ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲ. ಪ್ರತಿವರ್ಷ ಜಾತ್ರೆ ನಡೆಯುವ ವಿಶ್ವಭಾರತಿ ವಿಶ್ವವಿದ್ಯಾಲಯದ ಸುತ್ತಲೂ ನಿರ್ಮಿಸಲಾದ ಗೋಡೆಗೆ ಬೆಂಬಲ ನೀಡಿ ಹಿಂದೊಮ್ಮೆ ಮಾತನಾಡಿದ್ದ ಅಗ್ನಿಮಿತ್ರ ಕಾಲೇಜು ಕ್ಯಾಂಪಸ್​ ಅನ್ನು ಸೆಕ್ಸ್​ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆಂದು ದೂರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net