

ಮಂಗಳೂರು: ನಗರ ಸಾರಿಗೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಬಸ್ ನಿರ್ವಾಹಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ಕೊಣಾಜೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು-ಮುಡಿಪು ನಡುವೆ ಸಂಚರಿಸುವ ನಗರ ಸಾರಿಗೆ ಸರ್ಕಾರಿ ಬಸ್ಸಿನ ನಿರ್ವಾಹಕ ಬಾಗಲಕೋಟೆ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಬಸ್ಸಿನ ಸೀಟಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಯುವತಿಯೋರ್ವಳು ಗಾಢ ನಿದ್ದೆಗೆ ಜಾರಿದ್ದು ಈ ವೇಳೆ ಬಸ್ಸು ನಿರ್ವಾಹಕ ಪ್ರದೀಪ್ ಯುವತಿಯ ಎದೆಯ ಭಾಗವನ್ನ ಸವರಿ ಲೈಂಗಿಕ ಕಿರುಕುಳ ನೀಡುತ್ತಿರುವ ಕುಕೃತ್ಯವನ್ನ ಸಹ ಪ್ರಯಾಣಿಕರೋರ್ವರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಘಟನೆಯು ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಜಪ್ಪಿನಮೊಗೇರು ಪ್ರದೇಶದಲ್ಲಿ ನಡೆದಿದೆಯೆಂದು ಹೇಳಲಾಗಿದೆ. ಬಸ್ಸು ನಿರ್ವಾಹಕನ ಅಶ್ಲೀಲ ವರ್ತನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಕೊಣಾಜೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರಣ ಕಂಕನಾಡಿ ನಗರ ಠಾಣೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ಪ್ರಕರಣದ ಮುಂದಿನ ತನಿಖೆ ನಡೆಸಲಿದ್ದಾರೆ.
* ಕರ್ತವ್ಯದಿಂದ ಅಮಾನತು: ಬಸ್ ನಿರ್ವಾಹಕ ಪ್ರದೀಪ್ ಯುವತಿಗೆ ಲೈಂಗಿಕ ಕಿರುಕುಳ ನೀಡುವ ವಿಡಿಯೋ ಗುರುವಾರ ಬೆಳಗ್ಗೆ ಗಮನಕ್ಕೆ ಬಂದು 15 ನಿಮಿಷದಲ್ಲಿ ವಿಚಾರಣೆ ಕಾಯ್ದಿರಿಸಿ ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಅಸಭ್ಯವಾಗಿ ನಡೆದುಕೊಂಡ ಯಾರನ್ನೂ ಸಹಿಸಲಾಗದು ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.