

ಬೆಂಗಳೂರು: ಯೂಟ್ಯೂಬ್ನಲ್ಲಿ ಇತ್ತೀಚೆಗಷ್ಟೇ ಧ್ರುವ ಸರ್ಜಾ ನಾಯಕತ್ವದ ‘ಪೊಗರು’ ಚಿತ್ರದ ‘ಖರಾಬು’ ಹಾಡು ಬಿಡುಗಡೆಯಾಗಿತ್ತು. ಲಾಕ್ಡೌನ್ನಲ್ಲಿ ಧ್ರುವ ಅಭಿಮಾನಿಗಳಿಗೆ ಆ ಹಾಡಿನಿಂದ ಒಳ್ಳೇ ಟ್ರೀಟ್ ಸಿಕ್ಕಂತಾಗಿತ್ತು. ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ಕೋಟ್ಯಂತರ ಜನರಿಂದ ವೀಕ್ಷಣೆಯನ್ನೂ ಕಂಡಿದೆ ಈ ಹಾಡು. ಅದರ ಜತೆಗೆ ಹಲವು ವಿವಾದಗಳೂ ಈ ಚಿತ್ರಕ್ಕೆ ಅಂಟಿಕೊಂಡಿರುವುದು ಇಲ್ಲಿ ಹೇಳಲೇಬೇಕಾದ ವಿಚಾರ.
ಹೌದು, ‘ಖರಾಬು’ ಹಾಡಿಗೆ ಮೆಚ್ಚುಗೆ ಸಿಕ್ಕಂತೆ ಅಲ್ಲಲ್ಲಿ ಒಂದಷ್ಟು ಕಪ್ಪು ಚುಕ್ಕಿಗಳೂ ಅಂಟಿಕೊಂಡಿವೆ. ಹಾಡಿನಲ್ಲಿ ಹೆಣ್ಣನ್ನು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಸಬಾರದಿತ್ತು ಎಂಬ ಮಾತುಗಳೂ ಕೇಳಿಬಂದಿವೆ. ಅಷ್ಟೇ ಅಲ್ಲ, ನಟ ಚೇತನ್ ಈ ಹಾಡಿನ ಕುರಿತು ಪರೋಕ್ಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಅದೇ ಹಾಡಿನ ಬಗ್ಗೆ ನಿರ್ದೇಶಕ ನಂದಕಿಶೋರ್ ಒಂದಷ್ಟು ಮಾಹಿತಿ ನೀಡಿದ್ದಾರೆ. ಮೆಚ್ಚುಗೆ ಮತ್ತು ನೆಗೆಟಿವ್ ಕಮೆಂಟ್ ಹಿಂದಿನ ಮರ್ಮವನ್ನೂ ಹೇಳಿಕೊಂಡಿದ್ದಾರೆ.
‘ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಸೇರಿ ಹಲವು ಭಾಷೆಗಳಲ್ಲಿ ಖರಾಬು ಹಾಡನ್ನು ವಿಮರ್ಶೆ ಮಾಡಿದ್ದಾರೆ. ಎಲ್ಲರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಕನ್ನಡದಲ್ಲಿ ಕೆಲವರು ಮಾತ್ರ ಕಾಲೆಳೆಯುತ್ತಿದ್ದಾರೆ. ಹಾಗಾಗಿ ಇದೊಂದು ವ್ಯವಸ್ಥಿತ ಸಂಚು ಅಂದರೆ ತಪ್ಪಾಗಲಾರದು. ಬೇಕಂತಲೇ ನೆಗೆಟಿವ್ ಪಬ್ಲಿಸಿಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದರಿಂದಲೂ ನಮ್ಮ ಚಿತ್ರಕ್ಕೆ ಪೆಟ್ಟಾಗುವುದಿಲ್ಲ. ಬಹಳ ಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎಂದು ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ ನಂದಕಿಶೋರ್. ಇನ್ನು ಸಿನಿಮಾ ಕೆಲಸಗಳ ವಿಚಾರಕ್ಕೆ ಬಂದರೆ, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ತಿಂಗಳಲ್ಲೇ ‘ಪೊಗರು’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿವೆ. ಹಾಗಾಗಿ ಎಲ್ಲವೂ ಮೊದಲಿನಂತಾದಾಗ, ಸಿದ್ಧಗೊಂಡ ಸಿನಿಮಾಗಳ ತಂಡದವರೆಲ್ಲ ಒಂದೆಡೆ ಸೇರಿ, ಬಿಡುಗಡೆ ಬಗ್ಗೆ ಚರ್ಚೆ ಮಾಡಿ, ಆ ನಂತರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ನಂದಕಿಶೋರ್