ಕನ್ನಡದ ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ಅಪಾರ: ಸಾಹಿತಿ ಆರ್.ಎಸ್.ಚಂದ್ರಶೇಖರ್ ಹೇಳಿಕೆ

Poetry collection release Mandya
Published on

ಮಂಡ್ಯ: ಕನ್ನಡ ಭಾಷೆ ಬೆಳವಣಿಗೆಗೆ ಸಾಹಿತಿಗಳೂ ಕಾರಣರಾಗಿದ್ದಾರೆ. ಮಾತ್ರವಲ್ಲದೆ ಗೋಕಾಕ್ ಚಳವಳಿಯಿಂದ ಕನ್ನಡ ಭಾಷೆಗೆ ಶಕ್ತಿ ಮತ್ತಷ್ಟು ಹೆಚ್ಚಾಯಿತು ಎಂದು ಸಾಹಿತಿ ಆರ್.ಎಸ್.ಚಂದ್ರಶೇಖರ್ ಹೇಳಿದರು.

ನಗರದ ಹಿಂದಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕವಲುದಾರಿ ಕವನ ಸಂಕಲನ ಬಿಡುಗಡೆ, ರಾಜ್ಯಮಟ್ಟದ ಕವಿಕಾವ್ಯ ಮೇಳ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾಷೆಯ ವೃದ್ಧಿಗೆ ಗಣ್ಯವ್ಯಕ್ತಿಗಳ ಮಾತುಗಾರಿಗೆಯೂ ಪ್ರಭಾವ ಬೀರುತ್ತದೆ. ವರನಟ ಡಾ.ರಾಜ್ ಕುಮಾರ್ ಅವರಂತಹ ಮೇರುನಟರ ಮಾತುಗಾರಿಗೆ ಮಹತ್ವ ಹೆಚ್ಚಿಸಿತ್ತು ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಸಮಾಜದ ಅಂಕುಡೊಂಕು ತಿದ್ದಲು ಉತ್ತಮ ಸಾಹಿತಿಗಳ ಅವಶ್ಯಕತೆ ಇದೆ. ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಗಳು ಹೊರಬರಬೇಕಿದೆ. ವಾಸ್ತವ ಚಿತ್ರಣವನ್ನು ಅಕ್ಷರ ರೂಪದಲ್ಲಿ ತೆರೆದಿಡುವ ಕೌಶಲತೆ, ಎದೆಗಾರಿಕೆಯು ಬೇಕು ಎಂದು ಅಭಿಪ್ರಾಯಪಟ್ಟರು.

ಸಾಹಿತಿಗಳು ಮರೆಯಾದರೂ ಅತ್ಯುತ್ತಮ ಬರಹದಿಂದ ಸದಾ ಜೀವಂತವಾಗಿರುತ್ತಾರೆ. ಇಂತಹವರು ಸದಾ ನಮ್ಮನ್ನು ಕಾಡುತ್ತಾರೆ. ಸಮಾಜವನ್ನು ತಿದ್ದುವ ಸಾಹಿತಿಗಳನ್ನು ಬುದ್ಧಿಜೀವಿಗಳೆಂದು ಕರೆಯಲಾಗುತ್ತಿದೆ. ಆದರೆ ಇಂತಹ ಕೆಲ ಬುದ್ಧಿಜೀವಿಗಳು ಲದ್ದಿತಿನ್ನುವ ಹಂಬಲಕ್ಕೆ ಬಿದ್ದು, ಸಮಾಜದ ದಿಕ್ಕು ತಪ್ಪಿಸುತ್ತಾರೆ ಎಂದರು.

ಸಾಹಿತಿ ಸುರೇಶ್ ಮಲ್ಲಾಡದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಮುಖಂಡರಾದ ಗುರುಪ್ರಸಾದ್, ಡಾ.ಎಚ್.ಸಿ.ಆನಂದ್, ವೇದಿಕೆ ಅಧ್ಯಕ್ಷ ಪೋತೇರ ಮಹದೇವು ಇತರರಿದ್ದರು.

ಇದೇ ಸಂದರ್ಭದಲ್ಲಿ ‘ಕವಲುದಾರಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ನಂತರ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಕವಿತೆ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net