ಕನ್ನಡಿಗರು ಎಂದೂ ಮರೆಯಲಾಗದ ಕವಿ ಮುದ್ದಣ...

Book-1
Published on

ಡಾ. ಬಿ.ಎ. ವಿವೇಕ್​ ರೈ ಬಣ್ಣನೆ

ಶ್ರೀರಾಮಾಶ್ವಮೇಧಂ ಕೃತಿ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಂದಳಿಕೆಯ ಕವಿ ಮುದ್ದಣ ಬದುಕಿದ ಕಾಲ ಕಡಿಮೆಯಾದರೂ ಸಹ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಭಾಷೆ, ರಚನೆ, ಶೈಲಿಯೂ ಸಹ ಹೊಸತನದಿಂದ ಕೂಡಿರುತ್ತಿತ್ತು. ಹೊಸ ಮನ್ವಂತರವನ್ನೇ ಸೃಷ್ಟಿಸಿದ್ದ ಅವರನ್ನು ಕನ್ನಡ ಸಾಹಿತ್ಯ ಹಾಗೂ ಕನ್ನಡಿಗರು ಎಂದೂ ಮರೆಯಲಾರರು ಎಂದು ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ್​ ರೈ ಬಣ್ಣಿಸಿದರು.

ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ನಂದಳಿಕೆಯ ಮುದ್ದಣ ಪ್ರಕಾಶನದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮುದ್ದಣ 155ನೇ ಜನ್ಮದಿನಾಚರಣೆ ನಿಮಿತ್ತ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ ಅವರ ಮುದ್ದಣ ಕವಿ ರಚಿತಂ ಶ್ರೀರಾಮಾಶ್ವಮೇಧಂ (ಡಾ. ಪಾದೇಕಲ್ಲು ವಿಷ್ಣು ಭಟ್​ ಸಂಪಾದಕತ್ವ) ಹಾಗೂ ನಂದಳಿಕೆ ಐಸಿರಿ ದರ್ಶನ (ಕೆ.ಎಲ್​. ಕುಂಡಂತಾಯ, ನಂದಳಿಕೆ ರಾಮಚಂದ್ರ ರಾವ್​ ಸಂಪಾದಕತ್ವ) ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಶ್ರೀರಾಮಾಶ್ವಮೇಧಂ ಸಾರ್ವಕಾಲಿಕ ಕೃತಿ

Book-4
ಕೃತಿ ಪರಿಚಯ ಮಾಡಿದ ಬಹುಭಾಷಾ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ್​ ಭಾರಧ್ವಾಜ್​ ಮಾತನಾಡಿ, ಮುದ್ದಣನ ಶ್ರೀರಾಮಾಶ್ವಮೇಧಂ ಕೃತಿಯಲ್ಲಿ ಸಾರ್ವಕಾಲಿಕ ಮೌಲ್ಯವಿದೆ. ಅದು ಎಂದೂ ಕನ್ನಡ ಸಾಹಿತ್ಯದಿಂದ ಮರೆತು ಹೋಗದು. ಮುದ್ದಣನಿಗೆ ಆಯಸ್ಸು ಕಡಿಮೆ ಇತ್ತಾದರೂ ಅವರ ಅವರ ಕೃತಿಗಳ ಮೌಲ್ಯ ಅಥವಾ ಆಯಸ್ಸು ಎಂದಿಗೂ ಅಂತ್ಯ ಕಾಣದು ಎಂದರು.

ಹಿರಿಯ ಭಾಷಾಂತರಕಾರ, ವಿದ್ವಾಂಸ ಪ್ರೊ. ಎನ್​.ಟಿ. ಭಟ್​ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೆ.ಎಲ್​. ಕುಂಡಂತಾಯ, ನಂದಳಿಕೆ ಅರಮನೆ ಚಾವಡಿಯ ಸುಹಾಸ್​ ಹೆಗ್ಡೆ, ಮೂಲ್ಕಿಯ ಅರಸು ದುಗ್ಗಣ್ಣ ಸಾವಂತ, ಶೃಂಗೇರಿ ಮಠ, ಕೋಟೆಕಾರಿನ ಧರ್ಮದರ್ಶಿ ಸತ್ಯಾಶಂಕರ್​ ಬೊಳ್ಯಾವ, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪಕುಮಾರ್​ ಕಲ್ಕೂರ, ಜಯಲಕ್ಷ್ಮೀ ಬಾಲಚಂದ್ರ ರಾವ್​, ಸೌಜನ್ಯಾ ನಂದಳಿಕೆ ಉಪಸ್ಥಿತರಿದ್ದರು.

Book-5

ಡಾ. ಪಾದೇಕಲ್ಲು ವಿಷ್ಣು ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ಗುರು ಉಮೇಶ್​ ಸುವರ್ಣ ಮುದ್ದಣನ ರತ್ನಾವತಿ ಕಲ್ಯಾಣದ ಆಯ್ದ ಭಾಗಗಳನ್ನು ವಾಚಿಸಿದರು. ಆರ್​ಆರ್​ಸಿ ಸಹ ಸಂಶೋಧಕ ಡಾ. ಅರುಣಕುಮಾರ್​ ಎಸ್​.ಆರ್​. ಕಾರ್ಯಕ್ರಮ ನಿರ್ವಹಿಸಿದರು.

ಪಲ್ಲಕ್ಕಿಯಲ್ಲಿ ಮುದ್ದಣ ಕೃತಿಗಳ ಮೆರವಣಿಗೆ

Book-6
ಸಭಾ ಕಾರ್ಯಕ್ರಮದ ಮೊದಲು, ನಂದಳಿಕೆ ಶ್ರೀಕಾಂತ ಭಟ್​ ನೇತೃತ್ವದಲ್ಲಿ ಮುದ್ದಣನ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಕಂಬಳದ ಕೋಣಗಳೊಂದಿಗೆ ಪಲ್ಲಕ್ಕಿಯಲ್ಲಿ ಮುದ್ದಣ ಕೃತಿಗಳನ್ನು ಮೆರವಣಿಗೆ ನಡೆಸಲಾಯಿತು. ನಂತರ ಕೋಣಗಳಿಗೆ ಹಾರಾರ್ಪಣೆ ಮಾಡಿ ಸನ್ಮಾನಿಸಿ, ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂದಳಿಕೆ ಶ್ರೀಕಾಂತ ಭಟ್ ಅವರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net