

ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ದೇವಿ ಅವರನ್ನು ಉತ್ತರಾಖಂಡದ ನೀಲಕಂಠ ಧಾಮಕ್ಕೆ ತೀರ್ಥಯಾತ್ರೆಗೆ ತೆರಳಿದ ವೇಳೆ ಭೇಟಿ ಮಾಡಿದ್ದಾರೆ.
ಕೊಠಾರಿಯ ದೇವಸ್ಥಾನವೊಂದರ ಬಳಿ ಭೇಟಿಯಾದ ಇಬ್ಬರೂ, ಪರಸ್ಪರ ಆತ್ಮೀಯವಾಗಿ ತಬ್ಬಿಕೊಂಡು ಶುಭಾಶಯ ತಿಳಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸಹೋದರಿ ವಸಂತಿಬೆನ್ ಮತ್ತು ಅವರ ಪತಿ ಶಿವನ ದರ್ಶನಕ್ಕಾಗಿ ಉತ್ತರಾಖಂಡದ ನೀಲಕಂಠ ಧಾಮಕ್ಕೆ ಭೇಟಿ ನೀಡಿದ್ದರು.
ಪ್ರಧಾನಿ ಮೋದಿಯವರ ಸಹೋದರಿ ಕುಟುಂಬ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುವಾಗ, ಯೋಗಿ ಆದಿತ್ಯನಾಥ್ ಅವರ ತಂಗಿ ಶಶಿದೇವಿ ಅವರನ್ನು ಅವರ ಅಂಗಡಿಯಲ್ಲಿ ಭೇಟಿ ಮಾಡಿದ್ದಾರೆ. ಸದ್ಯ ಈ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಶಶಿದೇವಿ ಅವರು ನೀಲಕಂಠ ಧಾಮದಲ್ಲಿ ತಮ್ಮ ಪತಿಯೊಂದಿಗೆ ವ್ಯಾಪಾರ ಮಾಡುತ್ತಿದ್ದು, ‘ಮಾ ಭುವನೇಶ್ವರಿ ಪ್ರಸಾದ್ ಭಂಡಾರ್’ ಎಂಬ ಹೆಸರಿನ ಅಂಗಡಿಯಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಅವರ ಪತಿ ‘ಜೈ ಶ್ರೀ ಗುರು ಗೋರಕ್ಷನಾಥ್ ಜೀ’ ಹೆಸರಿನಡಿ ಸಣ್ಣ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).