

ಮೈಸೂರು: ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಅದರ ಲಾಭ ಮತ್ತು ಜನಕಲ್ಯಾಣಕ್ಕಾಗಿ ಕೈಗೊಂಡ ಎಲ್ಲಾ ಯೋಜನೆಗಳ ಕುರಿತು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎಳೆ ಎಳೆಯಾಗಿ ಜನರ ಮುಂದಿಟ್ಟಿದ್ದಾರೆ.
ಹಿಂದೆಂದೂ ಕಾಣದ ರೈಲ್ವೇ ಪ್ರಗತಿಯಲ್ಲಿ ಕ್ರಾಂತಿಯನ್ನೇ ಮಾಡಿದ್ದೇವೆ. ಪ್ರತಿ ಬಡಜನರ ಕಲ್ಯಾಣಕ್ಕಾಗಿ ತಂದ ಯೋಜನೆಗಳು ಹಳ್ಳಿ ಹಳ್ಳಿಗೂ ತಲುಪಿದ್ದು, ಪ್ರತಿಯೊಬ್ಬ ಜನರು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾವೆಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸರ್ಕಾರದ ಪೈಸೆ ಪೈಸೆಯ ಉಪಯೋಗ ಬಡಜನರ ಜೀವನಕ್ಕೆ ಹೊಸ ಉತ್ಸಾಹವನ್ನು ನೀಡಿದೆ. ನಾವು ದುಡ್ಡು ನೀಡಿದರೆ ಅದರ ಲಾಭ ಸಿಗುವುದಿಲ್ಲ, ಅದಕ್ಕಾಗಿ ಇಂತಹ ಯೋಜನೆಗಳನ್ನು ತಂದಿದ್ದೇವೆ ಎಂದರು.
10 ಸಾವಿರ ಕೋಟಿ ರೂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಈವರೆಗೆ ರೈತರ ಖಾತೆಗೆ ಜಮೆಯಾಗಿದೆ. 2ಲಕ್ಷ ಕೋಟಿ ರೂ.ವೆಚ್ಚದಲ್ಲಿ ಕಿಸಾನ್ ಕ್ರೆಡಿಟ್ ಯೋಜನೆ, ಬೀದಬದಿ ವ್ಯಾಪಾರಿಗಳಿಗೆ ಹಾಗೂ ಮುದ್ರಾ ಸಾಲ ಹೀಗೆ ವಿವಿಧ ಯೋಜನೆಗಳಲ್ಲಿ 180 ಸಾವಿರ ಕೋಟಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ದಿವ್ಯಾಂಗರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಈ ಮೂಲಕ 8 ವರ್ಷಗಳಲ್ಲಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದೇವೆ. ಪಶುಪಾಲನೆ ಮಾಡುವವರಿಗೆ ಬಡ್ಡಿರಹಿತ ಸಾಲ ನೀಡಿದ್ದದೇವೆ. ಬಡವರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸವಿದೆ. ಜನಪರ ಯೋಜನೆಗಳು ತಲುಪಿದ್ದರಿಂದ ಈ ವಿಶ್ವಾಸ ಬಂದಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ಇಲ್ಲಿ ಇನ್ನಷ್ಟು ವೇಗವಾಗಿ ಯೋಜನೆಗಳು ಜಾರಿಗೆ ಬರುತ್ತಿವೆ. ಮೈಸೂರು ರೈಲ್ವೇ -ನಾಗನಹಳ್ಳಿ ರೈಲು ನಿಲ್ದಾಣದ ಆಧುನೀಕರಣ ಪ್ರಾರಂಭಗೊಂಡಿದ್ದು, ಇಲ್ಲಿನ ರೈತರು ಹಾಗೂ ಜನರಿಗೆ ವಿಶೇಷ ಅನುಕೂಲವಾಗಲಿದೆ ಎಂದರು.
ಮೈಸೂರಿನ ಪ್ರವಾಸ ಮತ್ತಷ್ಟು ಉನ್ನತೀಕರಣಗೊಳ್ಳಲಿದೆ. 2014ರ ಮೊದಲಿದ್ದ ಕೇಂದ್ರ ಸರ್ಕಾರ ರೈಲ್ವೇ ಬಜೆಟ್ನಲ್ಲಿ ಕರ್ನಾಟಕಕ್ಕೆ 800 ಕೋಟಿ ರೂ ಹಣ ನೀಡಲಾಗಿತ್ತು. ಈ ಸರ್ಕಾರ ಕೇಂದ್ರದ ಬಜೆಟ್ನಲ್ಲಿ 7000 ಕೋಟಿ ರೂ. ಮೀಸಲಿಟ್ಟಿದೆ. ಆರು ಪಟ್ಟು ರೈಲ್ವೇ ಯೋಜನೆಗೆ ಹಣ ನೀಡಲಾಗಿದೆ. ರೈಲು ಆಧುನೀಕರಣ ವಿದ್ಯುದೀಕರಣಕ್ಕಾಗಿ ಕೋಟ್ಯಾಂತರ ರೂ.ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
2014ರ ಮೊದಲು 10 ವರ್ಷದಲ್ಲಿ 10 ವರ್ಷದಲ್ಲಿ ಕರ್ನಾಟಕದಲ್ಲಿ ಕೇವಲ 16 ಕಿಮೀ ರೈಲ್ವೇ ಲೈನ್ ವಿದ್ಯುದೀಕರಣವಷ್ಟೇ ಆಗಿತ್ತು. ಅದೂ 10 ವರ್ಷದಲ್ಲಿ ನಮ್ಮ ಸರ್ಕಾರದಲ್ಲಿ 1600 ಕಿಮೀ ವಿದ್ಯುದೀಕರಣ ಮಾಡಿದ್ದೇವೆ. ಅದೂ 8 ವರ್ಷದಲ್ಲಿ ಎಂದು ಯೋಜನೆಯ ವಿವರ ನೀಡಿದರು.
ಕರ್ನಾಟಕದ ಸಂಪೂರ್ಣ ವಿಕಾಸ ಹೀಗೆ ಇರಲಿ, ಡಬಲ್ ಇಂಜಿನ್ ಸರ್ಕಾರ ಇದಕ್ಕೆ ತಯಾರಾಗಿದೆ. ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ ನಿಮ್ಮ ಸೇವೆ ಮಾಡುವುದೇ ನಮಗೆ ಮತ್ತಷ್ಟು ಶಕ್ತಿ ನೀಡುತ್ತದೆ ಎಂದು ಹೇಳುವ ಮೂಲಕ ಮುಂದಿನ ಬಾರಿಗೂ ಬಿಜೆಪಿಯನ್ನೇ ಅಧಿಕಾರಕ್ಕೆ ತರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ನಾಳೆ ಯೋಗ ದಿನಾಚರಣೆ ಇಡೀ ವಿಶ್ವದ ನೋಟ ಮೈಸೂರಿನತ್ತ ಇರಲಿದೆ. ಉತ್ತಮ ಆರೋಗ್ಯಕ್ಕೆ ಯೋಗವನ್ನು ರೂಢಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ತಮ್ಮ ಭಾಷಣ ಮುಗಿಸಿದರು.