

ನವದೆಹಲಿ: ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಮೂರನೇ ಅವಧಿಯಲ್ಲಿ ದೇಶವನ್ನು ಅರೆವಾಹಕಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಬುಧವಾರ ಪ್ರಧಾನಿ ಉತ್ತರಿಸಿದರು.
ಪ್ರತಿಪಕ್ಷಗಳ ಗದ್ದಲದ ನಡುವೆ ಮೋದಿ ಮಾತು ಮುಂದುವರಿಸಿದ ಮೋದಿ ಅವರು, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಮೂರನೇ ಅವಧಿಯ ದೃಷ್ಟಿಕೋನವನ್ನು ಸಹ ತಿಳಿಸಿದರು.
ವಸತಿ ಯೋಜನೆಯಡಿ ಸರ್ಕಾರ 30 ಕೋಟಿ ಮನೆಗಳನ್ನು ನಿರ್ಮಿಸಿಕೊಡಲಿದೆ. ಕಳೆದ 10 ವರ್ಷಗಳಲ್ಲಿ ನಾವು ಭಾರತವನ್ನು ಮೊಬೈಲ್ ಫೋನ್‌ಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡಿದ್ದೇವೆ. ಈಗ ನಾವು ದೇಶವನ್ನು ಸೆಮಿಕಂಡಕ್ಟರ್‌ಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದರು.
ಭಾರತವನ್ನು ಹಸಿರು ಜಲಜನಕದ ಕೇಂದ್ರವನ್ನಾಗಿ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ. ಭವಿಷ್ಯದ ಎಲೆಕ್ಟ್ರಿಕ್ ವಾಹನಗಳು ಮತ್ತು ಹಸಿರು ಹೈಡ್ರೋಜನ್ ಬಗ್ಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಪ್ರಧಾನಿ ಸದನಕ್ಕೆ ವಿವರಿಸಿದರು.