ಟೆನಿಸ್​ ತಾರೆ ಸಾನಿಯಾ ಮಿರ್ಜಾ ನಿವೃತ್ತಿ: ಪತ್ರ ಬರೆದು ಪ್ರಧಾನಿ ಮೋದಿ ಶುಭ ಹಾರೈಕೆ

Photo of Sania Mirza and PM modi
ಸಾನಿಯಾ ಮಿರ್ಜಾ ಮತ್ತು ಪ್ರಧಾನಿ ಮೋದಿ
Published on

ನವದೆಹಲಿ: ಇತ್ತೀಚೆಗಷ್ಟೇ ವೃತ್ತಿಪರ ಟೆನಿಸ್​ಗೆ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು, ವರ್ಣರಂಜಿತ ವೃತ್ತಿಜೀವನಕ್ಕಾಗಿ ಅಭಿನಂದನೆ ಹೇಳಿದ್ದು, ನಿವೃತ್ತಿ ಜೀವನಕ್ಕೂ ಶುಭಹಾರೈಸಿದ್ದಾರೆ.

‘ಟೆನಿಸ್ ಮತ್ತು ಕ್ರೀಡೆಯತ್ತ ಹೆಚ್ಚಿನ ಮಹಿಳೆಯರು ಬರಲು ಸ್ಪೂರ್ತಿ ತುಂಬಿದ್ದೀರಿ’ ಎಂದಿರುವ ಪ್ರಧಾನಿ, ‘ನಿಮ್ಮ ಶ್ರೇಷ್ಠ ನಿರ್ವಹಣೆಯಲ್ಲಿ ಜಗತ್ತು, ಭಾರತದ ಕ್ರೀಡಾ ಪರಾಕ್ರಮದ ಕಿರುನೋಟವೊಂದನ್ನು ಕಂಡಿದೆ’ ಎಂದು ಶ್ಲಾಘಿಸಿದ್ದಾರೆ. ‘ಸಾನಿಯಾ ಇನ್ನು ಟೆನಿಸ್ ಆಡುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಟೆನಿಸ್ ಪ್ರೇಮಿಗಳು ಕಷ್ಟಪಡುತ್ತಾರೆ. ನೀವು ಟೆನಿಸ್ ಆಡಲು ಆರಂಭಿಸಿದಾಗ ಭಾರತೀಯ ಟೆನಿಸ್ ಬಹಳ ಭಿನ್ನವಾಗಿತ್ತು. ಆದರೆ ನಿಮ್ಮ ಯಶಸ್ಸಿನ ಬಳಿಕ ಹೆಚ್ಚಿನ ಮಹಿಳೆಯರು ಟೆನಿಸ್ ಆಡುವಂತಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಗಾಯದ ಸಮಸ್ಯೆ ನಡುವೆಯೂ ವೃತ್ತಿಜೀವನದ ಸವಾಲುಗಳನ್ನು ಮೆಟ್ಟಿನಿಂತಿರುವುದನ್ನು ಪ್ರಶಂಸಿಸಿರುವ ಮೋದಿ, ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿ ಎಂದಿದ್ದಾರೆ. ಪ್ರಧಾನಿ ಮಾರ್ಚ್ 9ರಂದು ಬರೆದಿರುವ ಪತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಾನಿಯಾ, ಸ್ಪೂರ್ತಿದಾಯಕ ಮಾತುಗಳಿಗಾಗಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಭಾರತ ಹೆಮ್ಮೆ ಪಡುವಂಥ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net