ನವದೆಹಲಿ: ಹಿಂದಿ ಭಾಷೆಯಲ್ಲಿ ‘ಶ್ರಮದ ಫಲವು ಸಿಹಿಯಾಗಿರುತ್ತದೆ’ ಎಂಬೊಂದು ಮಾತಿದೆ. ಬ್ಯಾಡ್ಮಿಂಟನ್ ಚ್ಯಾಂಪಿಯನ್ ಪಿ.ವಿ.ಸಿಂಧು ಅವರ ವಿಷಯದಲ್ಲಿ ಅದು ಅಕ್ಷರಶಃ ನಿಜವಾಗಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸಿಂಧುಗೆ ಐಸ್ ಕ್ರೀಂ ತಿನ್ನುವ ಅವಕಾಶ ಸಿಕ್ಕಿದೆ, ಅದೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ!
ಟೋಕಿಯೋ ಒಲಿಂಪಿಕ್ಸ್ಗೆ ಹೊರಡುವ ಮುಂಚೆ ಪ್ರಧಾನಿ ಮೋದಿ ಅವರು ಭಾರತದ ಕ್ರೀಡಾಪಟುಗಳೊಂದಿಗೆ ಮಾತುಕತೆ ನಡೆಸಿದ್ದರು. ಆಗ ಸಿಂಧು ಅವರು ರಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಮುಂಚೆ ಫಿಟ್ನೆಸ್ಗಾಗಿ ಐಸ್ಕ್ರೀಂ ತಿನ್ನದೇ ಇದ್ದುದರ ಬಗ್ಗೆ ಪ್ರಸ್ತಾಪಿಸಿದ್ದ ಮೋದಿ, ಈ ಬಾರಿಯೂ ಹಾಗೇ ಮಾಡುತ್ತಿದ್ದಾರಾ ಕೇಳಿದ್ದರು. ಜೊತೆಗೆ, ‘ಶ್ರಮಪಟ್ಟು ಆಡಿ, ನೀವು ಮತ್ತೆ ಯಶಸ್ವಿಯಾಗುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಒಲಿಂಪಿಕ್ಸ್ನಿಂದ ಹಿಂತಿರುಗಿದಾಗ ನಾನು ನಿಮ್ಮೊಂದಿಗೆ ಐಸ್ ಕ್ರೀಂ ತಿನ್ನುತ್ತೇನೆ’ ಎಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮುಂದುವರಿದ ಸಂಪುಟ ಕ್ಯಾತೆ: ಮತ್ತೆ ದೆಹಲಿಯತ್ತ ಸಿಎಂ ಬೊಮ್ಮಾಯಿ!
ಇದೀಗ ರಿಯೋ ಒಲಿಂಪಿಕ್ಸ್ನಂತೆಯೇ, ಟೋಕಿಯೋ ಒಲಿಂಪಿಕ್ಸ್ನಲ್ಲೂ ಸಿಂಧು ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಹಾಗೂ ಮೋದಿ ಅವರೊಂದಿಗೆ ನಿಂತು ಐಸ್ಕ್ರೀಂ ಕೂಡ ತಿಂದಿದ್ದಾರೆ! ಸಾಮಾಜಿಕ ಮಾಧ್ಯಮದಲ್ಲಿ ಹರಿದುಬಂದಿರುವ ಚಿತ್ರಗಳ ಪ್ರಕಾರ, ಇದು ಮೋದಿ ಅವರು ಒಲಿಂಪಿಕ್ಸ್ ಪದಕ ವಿಜೇತರಿಗಾಗಿ ಇಂದು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ನಡೆದಿದೆ. ಪ್ರಧಾನಿ ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡು ಸಿಂಧು ಮತ್ತು ಇತರ ಕ್ರೀಡಾಪಟುಗಳಿಗೆ ಐಸ್ಕ್ರೀಂ ಟ್ರೀಟ್ ಕೊಡಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
VIDEO| ಗದ್ದೆಗಿಳಿದು ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!