

ಕನ್ಯಾಕುಮಾರಿ: ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಕಳೆದ ಮೂರ್ನಾಲ್ಕು ತಿಂಗಳಿಂದ ದೇಶಾದ್ಯಂತ ಸಂಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೊನೇ ಹಂತದ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ಅವರು ವಿಶ್ರಾಂತಿಗಾಗಿ ಆಧ್ಯಾತ್ಮಿಕದತ್ತ ಮುಖ ಮಾಡಲಿದ್ದಾರೆ.
ಮೇ 31ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಬಂಡೆ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಅಂದರೆ ಮೇ 31ರಂದು ವಿವೇಕಾನಂದ ರಾಕ್ ಮೆಮೋರಿಯಲ್ ಹಾಲ್ನಲ್ಲಿ 73 ವರ್ಷದ ಮೋದಿ ಅವರು 48 ಗಂಟೆಗಳ ಧ್ಯಾನ ಮಾಡಲಿದ್ದಾರೆ.
ಸ್ವಾಮಿ ವಿವೇಕಾನಂದರು ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ದೊಡ್ಡ ಪ್ರಭಾವ ಬೀರಿತು. ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂದು ಜನರು ನಂಬುತ್ತಾರೆ. ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ.
ಸುಂದರವಾದ ವಿವೇಕಾನಂದ ರಾಕ್ ಸ್ಮಾರಕವು ದೇಶದ ದಕ್ಷಿಣದ ತುದಿಯಾದ ಕನ್ನಿಯಾಕುಮಾರಿ ಕರಾವಳಿಯ ಮಧ್ಯ ಸಮುದ್ರದ ಮಧ್ಯದಲ್ಲಿ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲೆಯ ಪ್ರತಿಮೆಯ ಸಮೀಪದಲ್ಲಿದೆ. ಮೂರನೇ ಬಾರಿಗೆ ಗೆಲ್ಲುವ ಗುರಿ ಹೊಂದಿರುವ ಪ್ರಧಾನಿ ಗುರುವಾರ ಸಂಜೆ ಇಲ್ಲಿಗೆ ಆಗಮಿಸಲಿದ್ದು ಜೂನ್ 1 ರಂದು ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಏಳು ಹಂತಗಳಲ್ಲಿ ನಿಗದಿಯಾದ ಲೋಕಸಭಾ ಚುನಾವಣೆ ಜೂನ್ 1 ರಂದು ಕೊನೆಗೊಳ್ಳಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ನರೇಂದ್ರ ಮೋದಿಯವರು ಕಳೆದ 2 ಬಾರಿಯೂ ಚುನಾವಣೆ ಮುಗಿದ ಬಳಿಕ ಫಲಿತಾಂಶ ಬರುವುದಕ್ಕೂ ಮೊದಲು ಆಧ್ಯಾತ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಈ ಬಾರಿ ನರೇಂದ್ರ ಮೋದಿ ಅವರು ಮೇ 30ರಂದು ಕನ್ಯಾಕುಮಾರಿ ತಲುಪುತ್ತಾರೆ ಮತ್ತು ಜೂನ್ 1ರವರೆಗೆ ಅಲ್ಲಿಯೇ ಇರುತ್ತಾರೆ. 2019ರಲ್ಲಿ ಚುನಾವಣೆಯ ಬಳಿಕ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಿದ್ದರು. 2014ರಲ್ಲಿ ಅವರು ಶಿವಾಜಿಯ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು.
ಈ ತಿಂಗಳ ಆರಂಭದಲ್ಲಿ, ಪ್ರಧಾನಿ ಮೋದಿ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ, ಚುನಾವಣಾ ಲೆಕ್ಕಾಚಾರಗಳು ನಮ್ಮ ಪರವಾಗಿ ಹೆಚ್ಚು ವಾಲುತ್ತಿವೆ. ನಾನು ಅದರ ಬಗ್ಗೆ ಏನನ್ನೂ ಹೇಳಬೇಕಾಗಿಲ್ಲ. ನಾವು ಮೇಲುಗೈ ಸಾಧಿಸಿದ್ದೇವೆ. ಅದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದರು.