

ನವದೆಹಲಿ: ಕೋವಿಡ್ ಸೋಂಕಿನ ಕಾರಣಕ್ಕೆ ಪ್ರವಾಸಿ ಭಾರತೀಯ ದಿನಾಚರಣೆ ಈ ಸಲ ವರ್ಚುವಲ್ ಕಾರ್ಯಕ್ರಮವಾಗಿರಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 9ರಂದು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದು 16ನೇ ಪ್ರವಾಸಿ ಭಾರತೀಯ ದಿವಸವಾಗಿದ್ದು, ಇದಕ್ಕೆ ಸಂಬಂಧಿಸಿದ ಅಂತರ್ಜಾಲ ತಾಣವನ್ನು ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರನ್ ಇಂದು ಲೋಕಾರ್ಪಣೆ ಮಾಡುತ್ತಿದೆ. ಅನಿವಾಸಿ ಭಾರತೀಯರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಮತ್ತು ಅವರನ್ನು ದೇಶದ ವಿಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದಕ್ಕೆ ಇದೊಂದು ವೇದಿಕೆಯಾಗಿದ್ದು. ಈ ಶೃಂಗದಲ್ಲಿ ಭಾಗವಹಿಸುವುದಕ್ಕೆ ಆನ್ಲೈನ್ ನೋಂದಣಿ ಕೂಡ ಆರಂಭವಾಗುತ್ತಿದೆ.
ಈ ಸಲದ ಕಾರ್ಯಕ್ರಮದ ಥೀಮ್ 'ಆತ್ಮನಿರ್ಭರಕ್ಕಾಗಿ ಕೊಡುಗೆ ನೀಡುವುದು'. ಜನವರಿ 9ರಂದು ಪೂರ್ವಾಹ್ನ ಪ್ರಧಾನಿ ಮೋದಿಯವರು ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಇದೇ ಸಂದರ್ಭದಲ್ಲಿ ಭಾರತವನ್ನು ಅರಿಯಿರಿ ಎಂಬ ರಸಪ್ರಶ್ನೆಯ ವಿಜೇತರ ಹೆಸರಗಳು ಪ್ರಕಟವಾಗಲಿದೆ. ಎರಡು ಅವಧಿಯಲ್ಲಿ ಆತ್ಮನಿರ್ಭರ ಭಾರತದಲ್ಲಿ ಅನಿವಾಸಿ ಭಾರತೀಯರ ಪಾತ್ರ ಮತ್ತು ಕೋವಿಡ್ ನಂತರದ ಕಾಲಘಟ್ಟದಲ್ಲಿ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಎದುರಿಸುವ ಸವಾಲುಗಳ ಕುರಿತು ಗೋಷ್ಠಿ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..