

ನವದೆಹಲಿ: 2023ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಒಂದು ವರ್ಷಕ್ಕೂ ಕಾಲ ಆಗಿದ್ದು, ಈ ಯೋಜನೆಗಳು ಚಾಲ್ತೊಯಲ್ಲಿವೆ. ಆಧರೆ, ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಕ್ತಿ ಯೋಜನೆಯನ್ನು (Shakti Scheme) ನಿಲ್ಲಿಸುವ ಬಗ್ಗೆ ಪರೋಕ್ಷ ಸುಳಿವು ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಈ ಹೇಳಿಕೆ ರಾಜ್ಯ ಮಾತ್ರವಲ್ಲ ಇದೀಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಸ್ವತಃ ಪ್ರಧಾನಿ ಮೋದಿ (PM Modi) ಅವರೇ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು (PM Modi), ಕಾಂಗ್ರೆಸ್ ನೀಡುವ ಭರವಸೆಗಳನ್ನು ಎಂದೂ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷವು ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ ಆದರೆ ಅವುಗಳನ್ನು ಸರಿಯಾಗಿ ಜಾರಿಗೊಳಿಸುವುದು ಕಠಿಣ ಅಥವಾ ಅಸಾಧ್ಯ ಎಂಬುವುದನ್ನು ಅರಿತುಕೊಂಡಿದೆ.
ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ. ಆದರೆ, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಕಠಿಣ. ಇದು ಅಸಾಧ್ಯ, ಕಠಿಣ ಮಾರ್ಗ ಎಂದು ಕಾಂಗ್ರೆಸ್ ಅರಿತುಕೊಂಡಿದೆ. ಅವರು ಜನರಿಗೆ ಭರವಸೆ ಮಾತ್ರ ನೀಡುತ್ತಾರೆ. ಅದರೆ ಅದನ್ನು ಎಂದಿಗೂ ಪೂರೈಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅವರು ಜನರ ಮುಂದೆ ಕೆಟ್ಟದಾಗಿ ನಿಂತಿದ್ದಾರೆ. ಅವರ ಭರವಸೆಗಳು ಈಡೇರಿಲ್ಲ. ಇದು ಈ ರಾಜ್ಯಗಳ ಜನರಿಗೆ ಕಾಂಗ್ರೆಸ್ ಮಾಡಿದ ಮಾಹಾಮೋಸ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಒಳರಾಜಕೀಯದಲ್ಲಿ ನಿರತವಾಗಿದೆ. ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವ ಬದಲು ಲೂಟಿ ಮಾಡುತ್ತಿದೆ. ಅಷ್ಟೇ ಅಲ್ಲ, ಈಗಿರುವ ಸ್ಕೀಮ್ಗಳನ್ನು ಹಿಂಪಡೆಯಲು ಕೂಡ ಹೊರಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ತೆಲಂಗಾಣದಲ್ಲಿ ರೈತರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ. ಈ ಹಿಂದೆ ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಅವರು ಕೆಲವು ಭರವಸೆ ನೀಡಿದ್ದರು. ಅದನ್ನು ಐದು ವರ್ಷಗಳವರೆಗೆ ಜಾರಿ ಮಾಡಲಿಲ್ಲ. ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇಂತಹ ಹಲವಾರು ಉದಾಹರಣೆಗಳಿವೆ.
ಕಾಂಗ್ರೆಸ್ನ ಪ್ರಾಯೋಜಿತ ನಕಲಿ ಭರವಸೆಯ ಸಂಸ್ಕೃತಿಯ ವಿರುದ್ಧ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಹರಿಯಾಣದ ಜನರು ಕಾಂಗ್ರೆಸ್ ಹೇಳಿದ ಸುಳ್ಳನ್ನು ತಿರಸ್ಕರಿಸಿದರು. ಸ್ಥಿರ, ಪ್ರಗತಿ ಆಧಾರಿತ ಮತ್ತು ಕಾರ್ಯಚಾಲಿತ ಸರ್ಕಾರಕ್ಕೆ ಆದ್ಯತೆ ನೀಡಿದರು. ಕಾಂಗ್ರೆಸ್ಗೆ ನೀಡುವ ಮತವು ಆಡಳಿತವಿಲ್ಲದ, ಕಳಪೆ ಆರ್ಥಿಕತೆ ಮತ್ತು ಸಾಟಿಯಿಲ್ಲದ ಲೂಟಿಗೆ ನೀಡುವ ಮತ ಎಂಬ ಅರಿವು ದೇಶದಾದ್ಯಂತ ಬೆಳೆಯುತ್ತಿದೆ. ಭಾರತದ ಜನರು ಅಭಿವೃದ್ಧಿ ಮತ್ತು ಪ್ರಗತಿಯನ್ನು ಬಯಸುತ್ತಾರೆ. ಅದೇ ಹಳೆಯ ನಕಲಿ ಭರವಸೆಯ ಕಾಂಗ್ರೆಸ್ನ್ನಲ್ಲ. ಕಾಂಗ್ರೆಸ್ ಆಡಳಿತ ಇರುವ ಯಾವುದೇ ರಾಜ್ಯವನ್ನು ಪರಿಶೀಲಿಸಿ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ. ಅಭಿವೃದ್ಧಿಯ ಪಥ ಮತ್ತು ಹಣಕಾಸಿನ ಶಿಸ್ತು ಹದಗೆಡುತ್ತಿದೆ. ಅವರ ಗ್ಯಾರಂಟಿಗಳು ಈಡೇರಿಲ್ಲ. ಇದು ಈ ರಾಜ್ಯಗಳ ಜನರಿಗೆ ಮಾಡಿದ ಭೀಕರ ವಂಚನೆಯಾಗಿದೆ. ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಇಂತಹ ರಾಜಕೀಯದ ಬಲಿಪಶುಗಳು ಎಂದು ಪ್ರಧಾನಿ ಮೋದಿ 9PM Modi) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.