

ಬೆಂಗಳೂರು: ದಕ್ಷಿಣ ಭಾರತದ ಮೊದಲ 'ವಂದೇ ಭಾರತ್ ಎಕ್ಸ್ಪ್ರೆಸ್ ರೈಲು'ಗೆ ಇಂದು(ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು. ಇದೇ ವೇಳೆ "ಭಾರತ್ ಗೌರವ್ ಕಾಶಿ ದರ್ಶನ್" ರೈಲುಗಳಿಗೂ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ, ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ ಸೇರಿದಂತೆ ವಿವಿ ಕಾರ್ಯಕ್ರಮಗಳ ಉದ್ಘಾಟನೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲಿಗೆ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರೋಡ್ ಶೋ ಮೂಲಕ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ, ವಂದೇ ಭಾರತ್ ಎಕ್ಸ್ಪ್ರಸ್ರೈಲು ಮತ್ತು ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಚಾಲನೆ ನೀಡಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ಶಶಿಕಲಾ ಜೊಲ್ಲೆ ಕಾಮದೇನು ಸ್ಮರಣಿಕೆ ನೀಡಿದರು. ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್ ಕುಮಾರ್ ಕೂಡ ಹಾಜರಿದ್ದರು.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದೇಶದ ಅತೀ ವೇಗದ ರೈಲು. ಬೆಂಗಳೂರು-ಮೈಸೂರು ಹಾಗೂ ಚೆನ್ನೈ ನಡುವೆ ಸಂಚರಿಸಲಿದೆ. 1,128 ಆಸನ, 16 ಕೋಚ್ ಸೇರಿ 384 ಮೀ. ಉದ್ದದ ಟ್ರೈನ್ ಇದು.