ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್​ನಲ್ಲಿ ಬಾಲಿವುಡ್​ ನಟಿಯ ನಯಾ ಅವತಾರ: ನೆಕ್ಲೇಸ್​ನಲ್ಲಿ ಮೋದಿ ಫೋಟೋ, ಚರ್ಚೆ ಶುರು! Ruchi Gujjar

Ruchi Gujjar
Published on

Ruchi Gujjar : ಪ್ರಸ್ತುತ ಪ್ಯಾರಿಸ್‌ನಲ್ಲಿ 78ನೇ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ಅದ್ಧೂರಿಯಾಗಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ. ಜಗತ್ತಿನ ಗಮನ ಸೆಳೆದಿರುವ ಈ ವಿಶೇಷ ಉತ್ಸವ ಫ್ಯಾಷನ್ ಕೇಂದ್ರಬಿಂದುವಾಗಿದ್ದು, ಇದರಲ್ಲಿ ಭಾಗವಹಿಸುವ ವಿವಿಧ ದೇಶಗಳ ಅನೇಕ ಸೆಲೆಬ್ರಿಟಿಗಳು ಹೊಸ ರೀತಿಯ ಉಡುಪುಗಳೊಂದಿಗೆ ಮನರಂಜಿಸುತ್ತಾರೆ. ಅದರಲ್ಲೂ ವೈವಿಧ್ಯಮಯ ಹಾಗೂ ವಿಚಿತ್ರ ಉಡುಪುಗಳೊಂದಿಗೆ ಎಲ್ಲರ ಹುಬ್ಬೇರಿಸುತ್ತಾರೆ. ಭಾರತದ ಅನೇಕ ಸೆಲೆಬ್ರಿಟಿಗಳು ಕೂಡ ಕಾನ್ಸ್​ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ.

ಇತ್ತೀಚೆಗೆ ಬಾಲಿವುಡ್ ನಟಿ ರುಚಿ ಗುಜ್ಜರ್ ಧರಿಸಿದ್ದ ಮೋದಿ ನಕ್ಲೇಸ್​ ಇದೀಗ ವೈರಲ್ ಆಗಿದೆ. ಕಾನ್ಸ್​ ಉತ್ಸವದಲ್ಲಿ ಭಾಗವಹಿಸಿದ್ದವರಿಗೆ ನಿನ್ನೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು. ಈ ವೇಳೆ ರುಚಿ ಗುಜ್ಜರ್ ಅವರು ಲೆಹೆಂಗಾ ಡ್ರೆಸ್ ಧರಿಸಿ ಔತಣಕೂಟಕ್ಕೆ ಬಂದಿದ್ದರು. ಮನಮೋಹಕ ಉಡುಪಿನಲ್ಲಿ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದರು. ಆದರೆ, ಎಲ್ಲರ ಗಮನ ಸೆಳೆದಿದ್ದು ಮಾತ್ರ ಅವರ ಕುತ್ತಿಗೆಯಲ್ಲಿದ್ದ ದೊಡ್ಡ ನೆಕ್ಲೇಸ್​. ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ಹೊಂದಿರುವ ಲಾಕೆಟ್‌ಗಳನ್ನು ನೆಕ್ಲೇಸ್​ಗೆ ಜೋಡಿಸಲಾಗಿತ್ತು.

ಬಿಜೆಪಿಯ ಸಂಕೇತವಾದ ಕಮಲದ ಹೂವಿನಲ್ಲಿ ಮೋದಿಯವರ ಫೋಟೋ ಇರುವ ಮೂರು ಲಾಕೆಟ್‌ಗಳನ್ನು ರುಚಿ ಗುಜ್ಜರ್ ತಮ್ಮ ನೆಕ್ಲೇಸ್​ಗೆ ಜೋಡಿಸಿದ್ದರು. ಇದರೊಂದಿಗೆ, ಎಲ್ಲರ ಕಣ್ಣುಗಳು ರುಚಿ ಧರಿಸಿದ್ದ ನೆಕ್ಲೇಸ್​ ಮೇಲೆ ಬಿದ್ದವು. ಇದೀಗ ಈ ಹಾರವು ಕಾನ್ಸ್​ನಲ್ಲಿ ವೈರಲ್ ಆಗಿದೆ. ರುಚಿ ಧರಿಸಿದ್ದ ಈ ಲೆಹೆಂಗಾ ಮತ್ತು ನೆಕ್ಲೇಸ್​ ಅನ್ನು ಡಿಸೈನರ್ ರೂಪಾ ಶರ್ಮಾ ವಿನ್ಯಾಸಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಮೋದಿ ನೆಕ್ಲೇಸ್​ ಬಗ್ಗೆ ಮಾತನಾಡಿರುವ ರುಚಿ ಗುಜ್ಜರ್, ನಮ್ಮ ರಾಜಸ್ಥಾನಿ ಸಂಪ್ರದಾಯವನ್ನು ಪ್ರತಿಬಿಂಬಿಸಲು ನಾನು ಈ ಉಡುಪನ್ನು ಧರಿಸಿದ್ದೆ. ಈ ನೆಕ್ಲೇಸ್ ಕೇವಲ ಆಭರಣವಲ್ಲ, ಇದು ಧೈರ್ಯ, ದೂರದೃಷ್ಟಿಯನ್ನು ಸಂಕೇತಿಸುತ್ತದೆ ಮತ್ತು ಭಾರತ ವಿಶ್ವ ವೇದಿಕೆಯಲ್ಲಿ ಮುಂದುವರಿಯುತ್ತದೆ ಎಂಬುದರ ಸೂಚಕವಾಗಿದೆ. ಇದನ್ನು ಕಾನ್ಸ್​ನಲ್ಲಿ ಧರಿಸುವ ಮೂಲಕ, ನಾನು ನಮ್ಮ ಪ್ರಧಾನಿಗೆ ಗೌರವ ಸಲ್ಲಿಸುತ್ತಿದ್ದೇನೆ. ಅವರ ನಾಯಕತ್ವದಲ್ಲಿ ಭಾರತ ಹೊಸ ಎತ್ತರವನ್ನು ತಲುಪಿದೆ ಎಂದು ಹೇಳಿದರು.

ಒಟ್ಟಾರೆಯಾಗಿ, ರುಚಿ ಗುಜ್ಜರ್ ಕಾನ್ಸ್​ನಲ್ಲಿ ಕೇವಲ ಒಂದು ಮೋದಿ ನೆಕ್ಲೇಸ್​ನೊಂದಿಗೆ ವೈರಲ್ ಆದರು. ರುಚಿ ಈ ಉಡುಪಿನಲ್ಲಿರುವ ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ನೆಟ್ಟಿಗರು ರುಚಿ ಗುಜ್ಜರ್ ಅವರನ್ನು ಹೊಗಳಿದ್ದಾರೆ. ಅಲ್ಲದೆ, ಅವರ ನಯಾ ಲುಕ್ ನೋಡಿ ಆಶ್ಚರ್ಯಚಕಿತರಾದರೆ. ಇನ್ನು ಕೆಲವರು ಟೀಕಿಸಿದ್ದಾರೆ. ಎಲ್ಲ ಓಕೆ ಮೋದಿ ಏಕೆ ಎಂದು ಪ್ರಶ್ನಿಸಿದ್ದಾರೆ. ಪ್ರಚಾರಕ್ಕಾಗಿ ಮೋದಿ ಹೆಸರನ್ನು ಬಳಸಿಕೊಂಡಿದ್ದಾರೆ ಎಂಧು ಟೀಕಿಸಿದ್ದಾರೆ.

ರುಚಿ ಗುಜ್ಜರ್ ಯಾರು?

ರುಚಿ ಗುಜ್ಜರ್ ರಾಜಸ್ಥಾನದ ಹುಡುಗಿ. ಅವರು ಜೈಪುರದಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ರುಚಿ ಗುಜ್ಜರ್ 2023 ರಲ್ಲಿ ಮಿಸ್ ಹರಿಯಾಣ ಆದರು. ನಂತರ, ಅವರು ಮಾಡೆಲಿಂಗ್ ಮಾಡುವಾಗ ಬಾಲಿವುಡ್‌ನಲ್ಲಿ ಅನೇಕ ವಿಡಿಯೋ ಆಲ್ಬಂಗಳಲ್ಲಿ ನಟಿಸಿದರು. ಪ್ರಸ್ತುತ, ಬಾಲಿವುಡ್ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದು, ಒಳ್ಳೆಯ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ. ಇದೀಗ ಮೋದಿ ನೆಕ್ಲೇಸ್​ನೊಂದಿಗೆ ವೈರಲ್ ಆದ ಬಳಿಕ ರುಚಿ ಗುಜ್ಜರ್‌ಗೆ ಬಾಲಿವುಡ್‌ನಲ್ಲಿ ಅವಕಾಶಗಳು ಸಿಗುತ್ತವೆಯೇ ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net