

ಗುಜರಾತ್: ನೆಟ್ಟಿಗರಿಗೆ ಸಾಮಾನ್ಯವಾಗಿ ಸೆಲೆಬ್ರಿಟಿ ತದ್ರೂಪಿಗಳ ಬಗ್ಗೆ ಕುತೂಹಲ ಹೆಚ್ಚು. ಇದೀಗ, ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಗುಜರಾತ್‌ನ ಚಾಟ್ ಮಾರಾಟಗಾರರೊಬ್ಬರು ಈ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿದ್ದಾರೆ.
ಬಿಳಿ ಕೂದಲಿನ ವ್ಯಕ್ತಿ ಪ್ರಧಾನಿ ಮೋದಿಯಂತೆಯೇ ಉಡುಪನ್ನು ಧರಿಸಿ, ಅದೇ ರೀತಿಯ ಗಡ್ಡವನ್ನು ಕತ್ತರಿಸಿ, ಮತ್ತು ರಿಮ್‌ಲೆಸ್ ಗ್ಲಾಸ್‌ಗಳನ್ನು ಧರಿಸಿ ಉತ್ತರ ಭಾರತದ ಜನಪ್ರಿಯ 'ಪಾನಿ ಪುರಿ' ಅನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ಬ್ಲಾಗರ್ 'ಈಟ್ವದೋಡರಾ' ಹಂಚಿಕೊಂಡ ವೀಡಿಯೊದಲ್ಲಿರುವ ವ್ಯಕ್ತಿಯ ಹೆಸರು ಆನಂದ್ ಖಟ್ಟರ್ ಎಂದು. ಇವರ ಧ್ವನಿಯೂ ಬಹುತೇಕ ಪ್ರಧಾನಿಯಂತೆಯೇ ಇದೆ.
ಅನಿಲ್ ಭಾಯಿ ಖಟ್ಟರ್ ಎಂದು ಗುರುತಿಸಲಾದ ವ್ಯಕ್ತಿ ಹೇಳುವಂತೆ 'ಜನರು ನನ್ನನ್ನು ಮೋದಿ ಎಂದು ಕರೆಯುವುದರಿಂದ ನನಗೆ ಸಂತೋಷ ಆಗುತ್ತದೆ. ಪ್ರಧಾನಿ ಮೋದಿಯವರು 'ಚಾಯ್‌ವಾಲಾ' ಆಗಿದ್ದರೆ ಅವರು 'ಪಾನಿಪುರಿವಾಲಾ' ಆಗಿರುವುದು ನನ್ನನ್ನು ಖುಷಿಪಡಿಸುತ್ತದೆ. ನಾನು ಚಹಾ ಮಾರುವವನಾಗಿದ್ದರೆ, ಪ್ರಧಾನಿ ಮೋದಿಯಂತೆ ಪ್ರಮುಖ ವ್ಯಕ್ತಿಯಾಗುತ್ತಿದ್ದೆ ಎಂದು ಗ್ರಾಹಕರು ಹೇಳುತ್ತಾರೆ' ಎಂದು ಅವರು ಹೇಳಿದ್ದಾರೆ.
ಅವರು 15 ವರ್ಷ ವಯಸ್ಸಿನಿಂದಲೂ ಪಾನಿಪುರಿ ಹಾಗೂ ಚಾಟ್ಸ್ ವ್ಯಾಪಾರದಲ್ಲಿದ್ದಾರೆ. ಅವರು ಪಾನಿಪುರಿ, ದಹಿಪುರಿ, ಸೇವ್ಪುರಿ, ಬಾಸ್ಕೆಟ್ ಚಾಟ್‌ನಂತಹ ಚಾಟ್ ವಸ್ತುಗಳನ್ನು ಗುಜರಾತ್‌ನ ಮೋಟಾ ಬಜಾರ್, ವಲ್ಲಭ ವಿದ್ಯಾನಗರದಲ್ಲಿ ಮಾರಾಟ ಮಾಡುತ್ತಾರೆ. ಇವರ ಚಾಟ್ಸ್ಗಳಿಗೆ ಅವರದ್ದೇ ಆದ ಅಭಿಮಾನಿಗಳೂ ಇದ್ದಾರೆ. ಮೋದಿ ರೀತಿ ಕಾಣುವುದರಿಂದ ಉದ್ಯಮದಲ್ಲಿ ಲಾಭವನ್ನೂ ಕಾಣುತ್ತಿದ್ದಾರೆ.
“ಮೋದಿಜಿ ಪಾನಿಪುರಿಯನ್ನು ಮಾರುತ್ತಿರುವಂತೆ ಕಾಣುತ್ತಿದೆಯೇ?'' ಎಂದು ಈ ವಿಡಿಯೋದ ಕ್ಯಾಪ್ಶನ್ನಲ್ಲಿ ಬರೆಯಲಾಗಿದೆ.
ಪ್ರಧಾನಿ ಮೋದಿಯವರ ತದ್ರೂಪಿಯನ್ನು ನೋಡಿ ನೆಟ್ಟಿಗರು ಬೆರಗಾಗಿದ್ದು ಬಳಕೆದಾರರೊಬ್ಬರು, "ಅವರ ಸ್ವರವೂ ಮೋದಿಯವರೊಂದಿಗೆ 80% ಹೊಂದಾಣಿಕೆಯಾಗುತ್ತಿದೆ " ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಮೋದಿಜಿ 2024 ರ ನಂತರ” ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು "ಧ್ವನಿ ಹೊಂದಾಣಿಕೆ 70% " ಎಂದು ಬರೆದಿದ್ದಾರೆ. (ಏಜೆನ್ಸೀಸ್)