

ಲಖನೌ: ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಪ್ರಯಾಗ್‌ರಾಜ್ ತಲುಪಿದ್ದಾರೆ. ಈ ಸಮಯದಲ್ಲಿ ಅವರು ಮಹಾಕುಂಭದ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿ ಗಂಗಾ ಮಾತೆಯನ್ನು ಪೂಜಿಸಲಿದ್ದಾರೆ. ಪ್ರಧಾನಮಂತ್ರಿ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿರುತ್ತಾರೆ.
ಪ್ರಧಾನಿ ಮೋದಿ ಅವರ ಪ್ರಯಾಗ್‌ರಾಜ್ ಭೇಟಿಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸೇರಿದಂತೆ ರಾಜ್ಯ ಸರ್ಕಾರದ ಹಲವಾರು ಹಿರಿಯ ಸಚಿವರು ಪ್ರಧಾನಿ ಮೋದಿಯವರೊಂದಿಗೆ ಉಪಸ್ಥಿತರಿರುತ್ತಾರೆ.
ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಿಂದ ಅರೈಲ್ ಘಾಟ್‌ಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅವರು ಅಲ್ಲಿಂದ ಬೋಟ್ ಮೂಲಕ ತ್ರಿವೇಣಿ ಸಂಗಮ ತಲುಪಿದ್ದಾರೆ. ನಂತರ ಸಂಗಮ ಘಾಟ್‌ನಲ್ಲಿ ಪುಣ್ಯ ಸ್ನಾನ ಕೈಗೊಳ್ಳಲಿದ್ದಾರೆ. ದೆಹಲಿ ವಿಧಾನಸಭೆಗೆ ಮತದಾನ ನಡೆಯುವ ವೇಳೆಯೇ ಪ್ರಧಾನಿ ಕುಂಭಮೇಳಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಈ ಭೇಟಿಯ ವೇಳೆ ಕುಂಭಮೇಳದ ಪ್ರದೇಶದಲ್ಲಿ ಭಕ್ತಾದಿಗಳಿಗೆ ಕಲ್ಪಿಸಲಾದ ವ್ಯವಸ್ಥೆಗಳ ಪರಿಶೀಲನೆ ಮತ್ತು ಸಾಧು ಸಂತರೊಡನೆ ಸಂವಾದ ನಡೆಸಲಿದ್ದಾರೆ.
ಡಿಸೆಂಬರ್ 13ರಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರು 5,500 ಕೋಟಿ ರೂ. ಮೌಲ್ಯದ 167 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಇದು ಸಾರ್ವಜನಿಕರಿಗೆ ಸಂಪರ್ಕ, ಸೌಕರ್ಯಗಳು ಮತ್ತು ಸೇವೆಗಳನ್ನು ಸುಧಾರಿಸಿತು. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆಯಾದ ಮಹಾ ಕುಂಭ 2025, ಪುಷ್ಯ ಪೂರ್ಣಿಮೆಯಂದು (ಜನವರಿ 13) ಪ್ರಾರಂಭವಾಯಿತು . ಮಹಾ ಕುಂಭಮೇಳವು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯವರೆಗೆ ಮುಂದುವರಿಯುತ್ತದೆ.(ಏಜೆನ್ಸೀಸ್)