

ಮಡಿಕೇರಿ: ಗೋಣಿಕೊಪ್ಪಲು ರೋಟರಿ ಸಂಸ್ಥೆಗೆ ವಿವಿಧ ಕಾರ್ಯಯೋಜನೆಗಳಿಗಾಗಿ ರೋಟರಿ ಜಿಲ್ಲೆಯಲ್ಲಿ ಪ್ಲಾಟಿನಂ ಪ್ಲಸ್ ಪ್ರಶಸ್ತಿ ದೊರಕಿದೆ.
ಮಂಗಳೂರಿನಲ್ಲಿ ಆಯೋಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೋಣಿಕೊಪ್ಪಲು ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ.ಸುಭಾಷಿಣಿ, ಕಾರ್ಯದರ್ಶಿ ಅರುಣ್ ತಮ್ಮಯ್ಯ ಮತ್ತು ಸದಸ್ಯರು ಜಿಲ್ಲಾ ರೋಟರಿ ಗವರ್ನರ್ ಆಗಿದ್ದ ಪ್ರಕಾಶ್ ಕಾರಂತ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯು ೨೦೨೨-೨೩ನೇ ರೋಟರಿ ವರ್ಷದಲ್ಲಿ ೭೮ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತ್ತು. ಪಿರಿಯಾಪಟ್ಟಣದಲ್ಲಿ ಐಕಾನ್ ರೋಟರಿ ಕ್ಲಬ್ ಎಂಬ ಹೊಸ ರೋಟರಿ ಸಂಸ್ಥೆಯನ್ನೂ ೫೪ ಸದಸ್ಯರಿಂದ ಪ್ರಾರಂಭಿಸಲಾಗಿತ್ತು.
ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯ ೪೩೫ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಕೆ, ಕಳತ್ತಮಾಡು, ಹೊಸೂರು, ಪಾಲಿಬೆಟ್ಟ ಸರ್ಕಾರಿ ಶಾಲೆಗಳಿಗೆ ಟೇಬಲ್, ಚೇರ್, ಲ್ಯಾಪ್ ಟಾಪ್ ಸೇರಿದಂತೆ ೩ ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ನೀಡಲಾಗಿತ್ತು. ಅಂತೆಯೇ ಗೋಣಿಕೊಪ್ಪ ರೋಟರಿ ಕ್ಲಬ್ ಆಯೋಜಿಸಿದ್ದ ಆರೋಗ್ಯ ಸಿರಿ ಯೋಜನೆಯಡಿಯಲ್ಲಿ ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರಗಳೂ ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗಿದ್ದವು. ನೇತ್ರ ಚಿಕಿತ್ಸಾ ಶಿಬಿರದಲ್ಲಿ ೪೧ ಅರ್ಹರಿಗೆ ಉಚಿತವಾಗಿ ಕನ್ನಡಕ ನೀಡಲಾಗಿತ್ತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾಡು ಹಣ್ಣಿನ ೧ ಲಕ್ಷ ಸಸಿಗಳನ್ನೂ ವನಸಿರಿ ಯೋಜನೆಯಡಿಯಲ್ಲಿ ನೆಟ್ಟಿದ್ದರು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯು ಜಿಲ್ಲಾ ರೋಟರಿ ಯೋಜನೆಯಾದ ವಿದ್ಯಾಸಿರಿ, ವನಸಿರಿಯಲ್ಲಿ ಮಾಡಿದ ಗಣನೀಯ ಸಾಧನೆಯನ್ನೂ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು ಎಂದು ಸಂಸ್ಥೆಯ ಅಧ್ಯಕ್ಷೆಯಾಗಿದ್ದ ಜೆ.ಕೆ.ಸುಭಾಷಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.