

ವಿಜಯವಾಣಿ ಸುದ್ದಿಜಾಲ ಬೈಂದೂರು
ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಬೈಂದೂರು ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ಗದ್ದೆಯಲ್ಲಿ ಭತ್ತದ ನಾಟಿ ಮಾಡಿಸುವ ಮೂಲಕ ಕೃಷಿ ಶಿಕ್ಷಣ ನೀಡಲಾಯಿತು.
ಶಾಲೆಗಳಲ್ಲಿ ಸಾಮಾನ್ಯವಾಗಿ ಆಟ, ಪಾಠದ ಜತೆಗೆ ಕೆಲ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಸಾಮಾನ್ಯ. ಆದರೆ ಬೈಂದೂರು ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಮಕ್ಕಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ವಿಭಿನ್ನವಾಗಿ ಪಾಠ ಮಾಡಿದ್ದು, ಉಳಿದವರಿಗೆ ಮಾದರಿಯಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ ಮಕ್ಕಳಿಗೆ ಗದ್ದೆ ಎಂದರೆ ಏನು, ಬೇಸಾಯ ಎಂದರೆ ಹೇಗೆ, ನಾಟಿ ಹೇಗೆ ಮಾಡಬೇಕು ಎಂದೆಲ್ಲ ಮಾಹಿತಿ ನೀಡುತ್ತಾ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಗಿತ್ತು.
102 ವರ್ಷ ಪ್ರಾಯದ ಪ್ರಗತಿಪರ ಹಿರಿಯ ಕೃಷಿಕ ಕುಪ್ಪಯ್ಯ ಪೂಜಾರಿ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಅವರಿಗೆ ಭತ್ತದ ಸಸಿ ನೀಡುವುದರ ಮೂಲಕ ಗದ್ದೆನಾಟಿಗೆ ಚಾಲನೆ ನೀಡಿದರು. ಕೃಷಿ ಬಗ್ಗೆ ತಮಗೆ ತಿಳಿದ ಮಾಹಿತಿಯನ್ನು ಮಕ್ಕಳಲ್ಲಿ ಹಂಚಿಕೊಂಡರು. ನಂತರ ಅವರು ಹಾಡಿನ ಮೂಲಕವೂ ಮಕ್ಕಳಿಗೆ ಕೃಷಿ ಬಗ್ಗೆ ಅರಿವು ಮೂಡಿಸಿದರು. ಕೃಷಿಕರಾದ ಮಂಜುನಾಥ ಶೆಟ್ಟಿ, ರಾಘವೇಂದ್ರ, ಕೃಷ್ಣ ಪೂಜಾರಿ ಹಾಗೂ ಗ್ರಾಮಸ್ಥರು, ತರಗತಿ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಕಚೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಕ್ಕಳು ಮಳೆಯನ್ನು ಲೆಕ್ಕಿಸದೆ ಉತ್ಸಾಹದಿಂದ ಪಾಲ್ಗೊಂಡು ಗದ್ದೆಯಲ್ಲಿ ನಾಟಿ ಮಾಡಿದರು. ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಸ್ಥಳೀಯರ ಸಹಕಾರದಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕೃಷಿ ಶಿಕ್ಷಣ ನೀಡಲಾಯಿತು.-ಮಂಜುನಾಥ ಶೆಟ್ಟಿ, ಹಿರಿಯ ಕೃಷಿಕರು
ಪಠ್ಯದಲ್ಲಿರುವ ಕೃಷಿ ಚಟುವಟಿಕೆ ಪಾಠ ಮಾಡಬೇಕಿದ್ದ ಶಿಕ್ಷಕರು, ವಿದ್ಯಾರ್ಥಿಗಳನ್ನು ನೇರವಾಗಿ ಗದ್ದೆಗೆ ಕರೆದುಕೊಂಡು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ರೈತರ ಪರಿಶ್ರಮ ಅರಿತ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ಸಂದರ್ಭ ಹಲವು ಪ್ರಶ್ನೆಗಳನ್ನು ಕೇಳಿ ತಮ್ಮಲ್ಲಿರುವ ಅನುಮಾನ ಬಗೆಹರಿಸಿಕೊಂಡರು. ಹಾಗೆಯೇ ಮಕ್ಕಳ ನಾಟಿ ಮಾಡುವ ಉತ್ಸಾಹ ಕಂಡ ಪಾಲಕರು ಹಾಗೂ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.-ಅಮಿತಾ ಶೆಟ್ಟಿ ಮುಖ್ಯಶಿಕ್ಷಕಿ, ಯು.ಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ