ರಸ್ತೆಬದಿ ಹೂವಿನ ಗಿಡ ನೆಡುವ ಕಾರ್ಯ : ಬಂಟ್ವಾಳ ಲಯನ್ಸ್ ಕ್ಲಬ್‌ನಿಂದ ಚಾಲನೆ

gida
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿಯಿಂದ ಲಯನ್ಸ್ ಸೇವಾ ಮಂದಿರದ ವರೆಗೆ ರಸ್ತೆಬದಿಯಲ್ಲಿ ಹೂವಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಬಂಟ್ಚಾಳ ಲಯನ್ಸ್ ಕ್ಲಬ್ ಚಾಲನೆ ನೀಡಿದೆ.

ಬಂಟ್ವಾಳ ಪುರಸಭೆಯ ಸಹಕಾರದೊಂದಿಗೆ ಲಯನ್ಸ್ ಕ್ಲಬ್ ಬಂಟ್ವಾಳ ಗಾಂಧಿ ಜಯಂತಿಯ ದಿನದಂದೇ ಮಹತ್ವಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಗಿಡಗಳಿಗೆ ನೀರು ಹಾಕಿ ಪೋಷಿಸುವ, ಗಿಡಗಳ ನಿರ್ವಹಣೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬಂಟ್ವಾಳ ಲಯನ್ಸ್ ಕ್ಲಬ್ ವಹಿಸಿಕೊಂಡಿದೆ.

ಕಸ ಬೀಳುತ್ತಿದ್ದ ಜಾಗ

ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಿಂದ ಹಾದು ಹೋಗುವ ರಸ್ತೆ ಉಕ್ಕಿನ ಸೇತುವೆ ಮೂಲಕ ಪಾಣೆಮಂಗಳೂರನ್ನು ಸಂಪರ್ಕಿಸುತ್ತದೆ. ಹಿಂದಿನ ರಾಷ್ಟ್ರೀಯ ಹೆದ್ದಾರಿಯಾಗಿದ್ದ ಈ ರಸ್ತೆಯಲ್ಲಿ ಜನರು ಕಸ ತಂದು ಸುರಿಯುತ್ತಾರೆ. ಇಲ್ಲಿ ಸಿಸಿಟಿವಿ ಅಳವಡಿಸಿದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಅನಧಿಕೃತ ಅಂಗಡಿಗಳು ಒಂದೊಂದಾಗಿ ತಲೆಯೆತ್ತುತ್ತಿದ್ದು, ನಗರದ ಅಂದಕ್ಕೆ ಕಪ್ಪುಚುಕ್ಕೆಯಾಗುತ್ತಿದೆ. ಇದನ್ನು ಮನಗಂಡ ಬಂಟ್ಚಾಳ ಲಯನ್ಸ್ ಕ್ಲಬ್ ಈ ಎಲ್ಲ ಸಮಸ್ಯೆಗೆ ಪರಿಹಾರ ಹಾಗೂ ಪರಿಸರದ ಅಂದ ಹೆಚ್ಚಿಸುವ ಉದ್ದೇಶದಿಂದ ನಗರ ಸುಂದರೀಕರಣ ಕಾರ್ಯಕ್ರಮದ ಮೂಲಕ ರಸ್ತೆಬದಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಬಂಟ್ಚಾಳದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗ ಲಯನ್ಸ್ ಕ್ಲಬ್ ಸದಸ್ಯರು, ಪುರಸಭೆಯ ಸಿಬ್ಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದರು. ಬಳಿಕ ಲಯನ್ಸ್ ಸೇವಾ ಮಂದಿರದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

ನಗರ ಸುಂದರೀಕರಣ ಯೋಜನೆಯ ಮೂಲಕ ಲಯನ್ಸ್ ಕ್ಲಬ್ ಬಂಟ್ವಾಳ, ಬಂಟ್ವಾಳ ಪುರಸಭೆಯ ಸಹಕಾರದೊಂದಿಗೆ ರಸ್ತೆ ಬದಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಗಿಡಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಲಯನ್ಸ್ ಕ್ಲಬ್ ಬಂಟ್ವಾಳ ಸದಸ್ಯರ ಸಹಕಾರದೊಂದಿಗೆ ಮಾಡಲಿದೆ. - ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷರು, ಲಯನ್ಸ್ ಕ್ಲಬ್ ಬಂಟ್ವಾಳ https://www.vijayavani.net/purvita-stands-first-in-essay-competition https://www.vijayavani.net/gandhi-jayanti-celebration

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net