ಡ್ರಾಗೊಂಡ ಭಾರತ-ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಅಹರ್ನಿಶಿ ಅಭ್ಯಾಸ ಪಂದ್ಯ

india and australia for web
Published on

ಸಿಡ್ನಿ: ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಅಹರ್ನಿಶಿ ತ್ರಿದಿನ ಅಭ್ಯಾಸ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದರೂ ಬೌಲರ್‌ಗಳು ನೀರಸ ನಿರ್ವಹಣೆ ತೋರಿದರು. ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೊದಲ ಎರಡು ಇನಿಂಗ್ಸ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಭಾರತೀಯ ಬೌಲರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ನಿಸ್ತೇಜ ನಿರ್ವಹಣೆಯಿಂದ ಗೆಲುವು ಕೈಚೆಲ್ಲಿದರು.

ಅಂತಿಮ ದಿನದಾಟದಲ್ಲಿ ಭಾರತ ನೀಡಿದ 473 ರನ್ ಗೆಲುವಿನ ಗುರಿ ಬೆನ್ನಟ್ಟಿದ ಆತಿಥೇಯ ತಂಡ, ಆರಂಭಿಕ ವೈಫಲ್ಯದ ನಡುವೆಯೂ ದಿಟ್ಟ ಹೋರಾಟ ತೋರಲು ಯಶಸ್ವಿಯಾಯಿತು. ಭಾರತದ ವೇಗಿ ಮೊಹಮದ್ ಶಮಿ (58ಕ್ಕೆ 2) ಮಾರಕ ದಾಳಿಯಿಂದಾಗಿ ಆರಂಭಿಕರಾದ ಮಾರ್ಕಸ್ ಹ್ಯಾರಿಸ್ (5) ಹಾಗೂ ಜೋ ಬರ್ನ್ಸ್ (1) ವಿಕೆಟ್ ಕಬಳಿಸಿದರು. ಇದರೊಂದಿಗೆ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಬಳಿಕ ನಿಕ್ ಮ್ಯಾಡಿನ್‌ಸನ್ (14) ಕೂಡ ಸಿರಾಜ್ ಎಸೆತದಲ್ಲಿ ನವದೀಪ್ ಸೈನಿಗೆ ವಿಕೆಟ್ ನೀಡಿದರು. ಇದರೊಂದಿಗೆ 25 ರನ್‌ಗಳಿಗೆ 3 ವಿಕೆಟ್ ಕಬಳಿಸಿದ ಭಾರತ ತಂಡ ಗೆಲುವಿನ ಅವಕಾಶ ಹೆಚ್ಚಿಸಿಕೊಂಡಿತು. ಬಳಿಕ ಜತೆಯಾದ ಬೆನ್ ಮೆಕ್‌ಡೆರ್‌ಮೊಟ್ (107*ರನ್, 167 ಎಸೆತ, 16 ಬೌಂಡರಿ) ಹಾಗೂ ಅಲೆಕ್ಸ್ ಕ್ಯಾರಿ (58ರನ್, 111 ಎಸೆತ, 7 ಬೌಂಡರಿ) ಜೋಡಿ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4ನೇ ವಿಕೆಟ್‌ಗೆ 117 ರನ್ ಜತೆಯಾಟವಾಡಿತು. ಹನುಮ ವಿಹಾರಿ ಎಸೆತದಲ್ಲಿ ಅಲೆಕ್ಸ್ ಕ್ಯಾರಿ, ಬದಲಿ ಫೀಲ್ಡರ್ ಕಾರ್ತಿಕ್ ತ್ಯಾಗಿಗೆ ಕ್ಯಾಚ್ ನೀಡಿದರು. ಬಳಿಕ ಜತೆಯಾದ ಜಾಕ್ ವಿಲ್ಡೆರ್‌ಮತ್ (111*ರನ್, 119 ಎಸೆತ, 12 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು.

ಬೆನ್ ಮೆಕ್‌ಡೆರ್‌ಮೊಟ್ - ಜಾಕ್ ವಿಲ್ಡೆರ್‌ಮತ್ ಜೋಡಿ ಮುರಿಯದ 5ನೇ ವಿಕೆಟ್‌ಗೆ 165 ರನ್ ಜತೆಯಾಟವಾಡಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಲ್ಲದೇ, ಭಾರತೀಯ ಬೌಲರ್‌ಗಳಿಗೆ ತಿರುಗೇಟು ನೀಡಿತು. ದಿನದಾಟದ ಅಂತ್ಯಕ್ಕೆ ಇನ್ನು 15 ಓವರ್‌ಗಳು ಬಾಕಿ ಇರುವಾಗಲೇ ಉಭಯ ತಂಡಗಳ ನಾಯಕ ಸಮ್ಮತಿ ಮೇರೆಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಭಾರತ : 194 ಮತ್ತು 90 ಓವರ್‌ಗಳಲ್ಲಿ 4 ವಿಕೆಟ್‌ಗೆ 386 ಡಿಕ್ಲೇರ್, ಆಸ್ಟ್ರೇಲಿಯಾ ಎ: 108 ಮತ್ತು 4 ವಿಕೆಟ್‌ಗೆ 307 (ಜಾಕ್ ವಿಲ್ಡೆರ್‌ಮತ್ 111*, ಬೆನ್ ಮೆಕ್‌ಡೆರ್‌ಮೊಟ್ 107*, ಅಲೆಕ್ಸ್ ಕ್ಯಾರಿ 58, ಮೊಹಮದ್ ಶಮಿ 58ಕ್ಕೆ 2, ಮೊಹಮದ್ ಸಿರಾಜ್ 54ಕ್ಕೆ 1, ಹನುಮ ವಿಹಾರಿ 14ಕ್ಕೆ 1).

ಮೊದಲ ಟೆಸ್ಟ್ ಆರಂಭ: ಡಿ.17ರಿಂದ, ಎಲ್ಲಿ : ಅಡಿಲೇಡ್, ಆರಂಭ: ಬೆಳಗ್ಗೆ 9.30ಕ್ಕೆ,

ನೇರ ಪ್ರಸಾರ: ಸೋನಿ ಸಿಕ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net