

ಗುರುಪುರ: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಮತ್ತು ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಭಾನುವಾರ ಪಿಲಿಕುಳ ಮತ್ಯೋತ್ಸವ-2025 ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಬೆಳೆಸಲಾದ ಮೀನು ಹಿಡಿದು, ಸ್ಥಳೀಯವಾಗಿ ಮಾರಾಟ ಮಾಡುವ ವರ್ಷದ ಮತ್ಯೋತ್ಸವ ಇದಾಗಿದೆ. ಸಮುದ್ರದ ಮೀನಿಗಿಂತ ಭಿನ್ನವಾಗಿರುವ ಈ ಮೀನು ತಿನ್ನಲು ರುಚಿ ಹಾಗೂ ಉತ್ತಮವಾಗಿವೆ. ಪಿಲಿಕುಳದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಸುವ ನಿಟ್ಟಿನಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಉಪಸಮಿತಿ ರಚಿಸಲಾಗಿದೆ. ಸಮಿತಿಯ ಸಲಹೆ-ಸೂಚನೆಯಂತೆ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಮುಖ್ಯವಾಗಿ ಪಿಲಿಕುಳವು ಪ್ರವಾಸೋದ್ಯಮ ದೆಸೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದರು.
ಕೆರೆ ಮೀನುಗಾರಿಕೆ: ಪ್ರತಿ ವರ್ಷದಂತೆ ಈ ವರ್ಷವೂ ಶಿಕಾರಿಪುರ, ಹರಪ್ಪನಹಳ್ಳಿ ಮತ್ತು ಕೊಟ್ಟೂರಿನ ನಿಪುಣ ಮೀನುಗಾರರು ಕಳೆದ ರಾತ್ರಿ ಕೆರೆಗೆ ಬಲೆ ಬೀಸಿದ್ದು, ಮುಂಜಾವದಿಂದಲೇ ತೆಪ್ಪಗಳ ಮೂಲಕ ದಡಕ್ಕೆ ಮೀನು ತರಲಾಯಿತು. ರೋಹು, ಕಾಟ್ಲ, ಕಾಮನ್ ಕಾರ್ಪ್(ಗೌರಿ ಮೀನು) ಮತ್ತು ತೆಲಪಿಯಾ ಮೀನು ಮಾರಾಟ ಜೋರಾಗಿತ್ತು. ಸುಮಾರು 10 ಗಂಟೆಯ ಹೊತ್ತಿಗೆ ನೂರಾರು ಗ್ರಾಹಕರು ಪಿಲಿಕುಳದತ್ತ ಆಗಮಿಸಿದ್ದು, ಸರದಿ ಸಾಲಿನಲ್ಲಿ ನಿಂತು ಮೀನು ಖರೀದಿ ಮಾಡಿದರು. ಒಂದು ಕಿಲೋ ತೆಲಪಿಯಾ ಮೀನಿಗೆ 100 ರೂ.ಆಗಿದ್ದರೆ ರೋಹು, ಕಾಟ್ಲ, ಕಾಮನ್ ಕಾರ್ಪ್ ಕೇಜಿಗೆ 160 ರೂ. ನಿಗದಿಪಡಿಸಲಾಗಿತ್ತು. ಈ ಬಾರಿ ಸಾವಿರ ಕಿಲೋಗಿಂತಲೂ ಹೆಚ್ಚಿನ ಮೀನು ಲಭ್ಯವಾಗಿದೆ ಪಿಲಿಕುಳ ಲೇಕ್ ಗಾರ್ಡನ್ ಮೀನುಗಾರಿಕೆಯ ಮುಂದಾಳತ್ವ ವಹಿಸಿದ್ದ ಪರಿಸರ ತಜ್ಞ ಡಾ. ಎಂ.ಎಸ್.ನಝೀರ್ ಹೇಳಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ-ನಿರ್ದೇಶಕ ದಿಲೀಪ್ ಕುಮಾರ್, ಕೆಎಫ್‌ಡಿಸಿ ಮಹಾಪ್ರಬಂಧಕ ಮಹೇಶ್ ಕುಮಾರ್, ಪಿಲಿಕುಳ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ನಿತೀನ್, ಮೀನುಗಾರಿಕಾ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ಶಿವಕುಮಾರ್ ಮಗದ, ಪ್ರಭಾರ ಆಡಳಿತಾಧಿಕಾರಿ ಅಶೋಕ್, ಪ್ರಾಧಿಕಾರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಎನ್.ಜಿ.ಮೋಹನ್, ಶಿವರಾಮ ಮಲ್ಲಿ, ಹಾಸನ ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ಬಿ.ಕೆ.ನಾಗರಾಜ್ ಇದ್ದರು.
ಪಿಲಿಕುಳ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಠಿ ಪ್ರಸ್ತಾವಿಸಿ ನಿರೂಪಿಸಿದರು.
20 ಸಾವಿರಕ್ಕೂ ಅಧಿಕ ಮರಿ ಬಿಡುಗಡೆ
ಲೇಕ್ ಗಾರ್ಡನ್‌ಗೆ ಈ ಬಾರಿ 20000ಕ್ಕೂ ಅಧಿಕ ಮೀನಿನ ಮರಿ ಬಿಡಲಾಯಿತು. ಕಳೆದ ವರ್ಷ ಕೆರೆಗೆ ಬಿಡಲಾಗಿದ್ದ ಮರಿ ಮೀನುಗಳಲ್ಲಿ ಮಳೆಗಾಲದಲ್ಲಿ ಕೆಲವು ಮೀನುಗಳು ಕೆರೆಯಿಂದ ಹೊರಗೆ ಹೋಗಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಲಾಗಿದೆ. ಈ ಬಾರಿ ಸುಮಾರು ನಾಲ್ಕೈದು ಕಿಲೋ ತೂಕದ ಮೀನುಗಳು ಬಲೆಗೆ ಬಿದ್ದಿವೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕ್ಲೀನ್ ಮಾಡಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು.
ಸಮುದ್ರ ಮೀನಿನ ಖಾದ್ಯ ಸ್ಟಾಲ್
ಪ್ರವಾಸಿಗರ ಆಕರ್ಷಣೆ ಉದ್ದೇಶದಿಂದ ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಕೆಎಫ್‌ಡಿಸಿ ಸಮುದ್ರ ಮೀನಿನ ಖಾದ್ಯಗಳ ಮಾರಾಟದ ಮೊಬೈಲ್ ಸ್ಟಾಲ್ ಅಳವಡಿಸಿತ್ತು. ಸ್ಟಾಲ್‌ನಲ್ಲಿ ಹುರಿದ ಮೀನಿನ ಖಾದ್ಯ ಲಭ್ಯವಿದ್ದು, ಮೀನು ಪ್ರಿಯರ ಬಾಯಲ್ಲಿ ನೀರೂರಿಸುವಂತಿತ್ತು. ಮಧ್ಯಾಹ್ನ 3 ರವರೆಗೆ ಮತ್ಯೋತ್ಸವ ಮುಂದುವರಿಯಿತು.