ಹುಲಿ ವೇಷ ಸ್ಪರ್ಧೆ - ಫುಡ್ ಫೆಸ್ಟ್ - ಪುತ್ತೂರು ಪಿಲಿಗೊಬ್ಬು ಸಮಿತಿ ಆಯೋಜನೆ - 5,6ರಂದು ಕಾರ್ಯಕ್ರಮ

Published on

ಪುತ್ತೂರು: ತುಳುನಾಡಿನ ಧಾರ್ಮಿಕ ಹಿನ್ನಲೆ ಇರುವ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ ಪುತ್ತೂರು ಪಿಲಿಗೊಬ್ಬು ಸಮಿತಿ ವತಿಯಿಂದ ಪಿಲಿಗೊಬ್ಬು ಹಾಗೂ ಜನರ ಸಂಭ್ರಮಕ್ಕಾಗಿ ಪುತ್ತೂರು ಫುಡ್ ಫೆಸ್ಟ್ ಸೀಸನ್-2 ಅ.5 ಹಾಗೂ 6ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ಜೆ ರೈ ಬಳಜ್ಜ ಹೇಳಿದರು.


5ರಂದು ಸಂಜೆ 4ಕ್ಕೆ ಫುಡ್ ಫೆಸ್ಟನ್ನು ಉದ್ಯಮಿ ಉಜ್ವಲ್ ಪ್ರಭು ಉದ್ಘಾಟಿಸಲಿದ್ದಾರೆ. ಸುಮಾರು 50 ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. 6ರಂದು ಬೆಳಗ್ಗೆ 10.30ಕ್ಕೆ ಪಿಲಿಗೊಬ್ಬು ವೇದಿಕೆಯನ್ನು ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಚರ‍್ಮನ್ ಡಾ. ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ಸಂಜೆ 5ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಆಯ್ದ 9 ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡಕ್ಕೆ 22 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪ್ರಥಮ 3 ಲಕ್ಷ ರೂ., ದ್ವಿತೀಯ 2 ಲಕ್ಷ ರೂ., ತೃತೀಯ 1ಲಕ್ಷ ರೂ. ಬಹುಮಾನ ಹಾಗೂ ಪ್ರೋತ್ಸಾಹಕ ಬಹುಮಾನ ನೀಡುವ ಜತೆಗೆ ಭಾಗವಹಿಸುವ ಪ್ರತಿ ತಂಡಕ್ಕೆ 50 ಸಾವಿರ ರೂ. ಗೌರವ ಧನ ನೀಡಲಾಗುವುದು. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನಿಗದಿ ಪಡಿಸಲಾಗಿದ್ದು, ವಿಶೇಷ ನಗದು ಬಹುಮಾನವಾಗಿ 10 ಸಾವಿರ ರೂ. ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಚಿತ್ರ ನಟ-ನಟಿಯರು ಭಾಗವಹಿಸಲಿದ್ದಾರೆ. ಲಕ್ಷಕ್ಕೂ ಅಽಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಎಂದರು. ಕಾರ್ಯಧ್ಯಕ್ಷ ಸುಜಿತ್ ರೈ ಪಾಳ್ತಾಡ್ ಉಪಸ್ಥಿತರಿದ್ದರು.


ಪಾರ್ಕಿಂಗ್‌ಗೆ ವ್ಯವಸ್ಥೆ

ವಾಹನ ನಿಲುಗಡೆಗೆ ಕಿಲ್ಲೆ ಮೈದಾನ, ದೇವಸ್ಥಾನದ ರಥ ನಿಲುಗಡೆ ಮುಂಭಾಗ, ನಾಗನ ಕಟ್ಟೆ ಹಾಗೂ ಅಯ್ಯಪ್ಪ ಗುಡಿ ಮುಂಭಾಗ, ಖಾಸಗಿ ಬಸ್ ನಿಲ್ದಾಣದ ಮುಂಭಾಗ, ಕಂಬಳ ಕೆರೆ ಎಡಭಾಗ, ಮೂಲನಾಗ ಸನ್ನಿಽಯ ಮುಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ 3 ಎಕರೆ ಜಾಗವನ್ನು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾಲಕ ನಾಗರಾಜ ಭಟ್ ತಿಳಿಸಿದರು.


ಸ್ವಚ್ಛತೆಗೂ ಇದೆ ಪ್ರೈಜ್
ಆಹಾರ ಮಳಿಗೆಯ ಮಾಲಕರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ವಿಶೇಷ ಸ್ಪರ್ಧೆಯನ್ನು ಇಡಲಾಗಿದೆ. ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ ಬಹುಮಾನ ನೀಡಲಾಗುವುದು. ಕಳೆದ ವರ್ಷ ಸ್ವಚ್ಛತಾ ಕಾರ್ಯಕ್ರದಲ್ಲಿ ಪ್ರಮುಖ ಪಾತ್ರವಹಿಸಿದ ಗದಗ ಮೂಲದ ರೇಣುಕಾ ಮತ್ತು 10 ಸ್ವಚ್ಛತಾ ಸಿಬ್ಬಂದಿಗೆ ಗೌರವಾರ್ಪಣೆ, ಸ್ವಚ್ಛತಾ ಸಿಬ್ಬಂದಿ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ವಿತರಣೆ ನಡೆಯಲಿದೆ ಎಂದು ಅಧ್ಯಕ್ಷ ಉಮೇಶ್ ನಾಯಕ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net