More

    ಭೌತಿಕ ಸ್ವಾತಂತ್ರ್ಯ ಅಂತಿಮ ಸ್ವಾತಂತ್ರ್ಯವಲ್ಲ…

    ಭೌತಿಕ ಸ್ವಾತಂತ್ರ್ಯ ಅಂತಿಮ ಸ್ವಾತಂತ್ರ್ಯವಲ್ಲ…ಸ್ವಾತಂತ್ರ್ಯ ಎನ್ನುವ ಪದ ಬೇರೆ ಬೇರೆ ಜನರಿಗೆ, ಅವರ ಜೀವನದ ಸಂದರ್ಭಕ್ಕನುಗುಣವಾಗಿ ಬೇರೆ ಬೇರೆ ಅರ್ಥಗಳನ್ನು ನೀಡುತ್ತದೆ. ಈ ದೇಶದಲ್ಲಿ, 1947ಕ್ಕೆ ಮೊದಲು, ಸ್ವಾತಂತ್ರ್ಯ ಎಂದರೆ ಆಂಗ್ಲರ ರಾಜ್ಯಭಾರದಿಂದ ಬಿಡುಗಡೆಯಾಗಿತ್ತು. ಆಂಗ್ಲರು ಭಾರತ ಬಿಟ್ಟು ಹೋದರೆ ನಾವು ಸ್ವತಂತ್ರರಾಗುತ್ತೇವೆಂದು ನಂಬಿದ್ದೆವು. ಅವರು ಹೊರಟುಹೋದರು. ಆಗಸ್ಟ್ 15ನೇ ತಾರೀಖು ನಮಗೆ ಈ ಕಾರಣಕ್ಕಾಗಿಯೇ ಮಹತ್ವದ್ದಾಗಿ ಉಳಿಯುತ್ತದೆ.

    ರಾಜಕೀಯವಾಗಿ ನಾವು ಮುಕ್ತರು. ಆದರೆ, ಸ್ವಾತಂತ್ರ್ಯವೆನ್ನುವುದು ಇನ್ನೂ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಮನುಷ್ಯರು ತಮ್ಮನ್ನು ಈ ಅಸ್ತಿತ್ವದ ಒಂದು ಸೀಮಿತ ತುಣುಕು ಎಂಬ ಅನುಭವದಲ್ಲಿರುವವರೆಗೂ, ಸ್ವಾತಂತ್ರ್ಯ ಒಂದು ಸಮಸ್ಯೆಯಾಗಿಯೇ ಉಳಿಯುತ್ತದೆ. ಮನುಷ್ಯರಲ್ಲಿ ಮಿತಿಗಳನ್ನು ಇಷ್ಟಪಡದ ಏನೋ ಒಂದು ಇದೆ. ಮಿತಿಯು ಎಷ್ಟೇ ದೊಡ್ಡದಿದ್ದರೂ, ಅದನ್ನು ತಲುಪಿದ ಕೂಡಲೇ, ನೀವು ಅದನ್ನು ತೊಡೆದುಹಾಕಲು ಬಯಸುತ್ತೀರ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಿಮ್ಮೊಳಗೆ ಏನೋ ಒಂದು ಅನಂತತೆಯನ್ನು ಕಂಡುಕೊಳ್ಳಲು ಹಂಬಲಿಸುತ್ತಿರುತ್ತದೆ.

    ಯಾವುದು ಅನಂತವಾಗಬಹುದು? ಎಲ್ಲಾ ಭೌತಿಕ ರೂಪಗಳಿಗೂ ಒಂದು ಮಿತಿಯಿರಲೇಬೇಕು. ಒಂದು ಭೌತಿಕ ವಸ್ತು ಸಣ್ಣದಿರಬಹುದು ಅಥವಾ ದೊಡ್ಡದಿರಬಹುದು. ಆದರೆ, ಅದಕ್ಕೆ ಒಂದು ಗೊತ್ತುಪಡಿಸಿದ ಮಿತಿಯಿರಲೇಬೇಕು. ಈ ಅಮಿತತೆಯನ್ನು ಹೊಂದುವ ಹಂಬಲದ ಅರ್ಥವೇನೆಂದರೆ ಭೌತಿಕತೆಯನ್ನು ಮೀರಿದ ಆಯಾಮವನ್ನು ರ್ಸ³ಸುವ ಹಂಬಲವೊಂದು ನಿಮ್ಮೊಳಗೆ ಇದೆ. ಅಂದರೆ ನಿಮ್ಮೊಳಗಿರುವ ಏನೋ ಒಂದು ಆಧ್ಯಾತ್ಮಿಕವಾಗಲು ಹಂಬಲಿಸುತ್ತಿದೆ. ಆಧ್ಯಾತ್ಮಿಕರಾಗುವುದೆಂದರೆ ಪ್ರಾರ್ಥಿಸುವುದು ಅಥವಾ ದೇವಸ್ಥಾನಗಳಿಗೆ ಹೋಗುವುದಲ್ಲ; ನೀವು ದೈಹಿಕ ಮಿತಿಗಳನ್ನು ಮೀರಿದ ಆಯಾಮವನ್ನು ಅನುಭವಿಸಲು ಬಯಸುತ್ತಿದ್ದೀರಿ ಎಂದರ್ಥ. ವಿಮೋಚನೆಯ ಈ ಹಂಬಲ ಪ್ರತಿಯೊಬ್ಬ ಮನುಷ್ಯರಲ್ಲೂ ಇದೆ. ಒಂದೋ ನೀವು ಅದನ್ನು ಕಂತುಗಳಲ್ಲಿ ಸಮೀಪಿಸಬಹುದು ಅಥವಾ ಪ್ರಜ್ಞಾಪೂರ್ವಕವಾಗಿ ಅದರ ಕಡೆ ಸಾಗಬಹುದು.

    ಇದನ್ನೂ ಓದಿ: ಎರಡನೇ ಮಹಡಿಯಿಂದ ಬಿದ್ದಿದ್ದ 3 ವರ್ಷದ ಮಗು ಸಾವು; ಫಲಿಸಲಿಲ್ಲ ಮೂರು ದಿನಗಳ ಜೀವನ್ಮರಣ ಹೋರಾಟ

    ಅಮಿತರಾಗುವ ಹಂಬಲವನ್ನು ನಿಯಂತ್ರಿಸುವವರು ಒಂದು ಕ್ಷಣದ ನೆಮ್ಮದಿಯನ್ನೂ ತಿಳಿಯಲಾರರು. ಜೀವನದ ಪ್ರಕ್ರಿಯೆ ಕಠೋರವಾಗಿರುತ್ತದೆ. ಅದು ಎಂದಿಗೂ ನಿಲ್ಲುವುದಿಲ್ಲ. ನಿಮ್ಮ ಶರೀರ, ಮತ್ತು ಕೆಲವು ಸಲ ನಿಮ್ಮ ಮನಸ್ಸು, ನಿದ್ರೆ ಮಾಡಬಹುದು, ಆದರೆ, ನಿಮ್ಮೊಳಗಿನ ಜೀವನದ ಮೂಲ ಎಂದಿಗೂ ನಿದ್ರಿಸುವುದಿಲ್ಲ. ಅದರ ಕಾರ್ಯಯೋಜನೆ ಯಾವಾಗಲೂ ಜಾರಿಯಲ್ಲಿರುತ್ತದೆ. ನೀವು ಅದರೊಂದಿಗೆ ಹೊಂದಿಕೊಂಡರೆ, ಅದು ನಿಮಗೆ ಸ್ವಲ್ಪ ಆರಾಮವನ್ನು ನೀಡುತ್ತದೆ; ನೀವು ಅದರ ವಿರುದ್ಧ ಕೆಲಸ ಮಾಡಿದರೆ, ಅದು ನಿಮಗೆ ನರಕವನ್ನು ನೀಡುತ್ತದೆ. ಈ ಸಂಸ್ಕೃತಿಯಲ್ಲಿ ನಾವು ಮುಕ್ತಿಯ ಬಗ್ಗೆ ಮಾತನಾಡುವುದು ಒಂದು ಸಿದ್ಧಾಂತದಂತೆ ಅಲ್ಲ ಅಥವಾ ಯಾರೋ ಒಬ್ಬ ಗುರು ಕಂಡುಹಿಡಿದ ಒಂದು ಉಪದೇಶದಂತೆ ಅಲ್ಲ. ನಾವು ಮುಕ್ತಿಯ ಕುರಿತು ಮಾತನಾಡುವುದು ಅದು ಮನುಷ್ಯ ಜೀವನದ ಮೂಲಭೂತ ಆಶೋತ್ತರವಾಗಿರುವುದರಿಂದ. ಒಂದು ಕಾಲದಲ್ಲಿ ಪ್ರಪಂಚದ ಈ ಭಾಗದ ಇಡೀ ಜನಸಂಖ್ಯೆಯು ಕೇವಲ ಪರಮ ಮುಕ್ತಿಯ ಉದ್ದೇಶವನ್ನಿಟ್ಟುಕೊಂಡು ಜೀವಿಸುತ್ತಿದ್ದರು. ಈ ಕಾರಣದಿಂದ, ಈ ಸಂಸ್ಕೃತಿಯ ಜನರು ಒಂದು ಮರ, ಒಬ್ಬ ವ್ಯಕ್ತಿ ಅಥವಾ ಒಂದು ಕೀಟ ಯಾವುದೇ ಆಗಲಿ, ಎಲ್ಲದಕ್ಕೂ ತಲೆಬಾಗಲು ಪೋ›ತ್ಸಾಹಿಸಿದರು. ಜನರು ಅತಿಯಾಗಿ ಸ್ವಯಂ ಪ್ರಾಧಾನ್ಯತೆಯನ್ನು ರೂಢಿಸಿಕೊಳ್ಳದಂತೆ ಮಾಡಲು ಈ ಸಂಸ್ಕೃತಿಯಲ್ಲಿ ಈ ಉಪಕರಣಗಳನ್ನು ಅಳವಡಿಸಲಾಯಿತು.

    ಇಂದು, ದುರದೃಷ್ಟವಶಾತ್, ಯಾವುದಕ್ಕಾದರೂ ತಲೆಬಾಗುವುದು ದೌರ್ಬಲ್ಯದ ಸಂಕೇತವೆಂದು ಕಾಣಲಾಗುತ್ತಿದೆ. ಇನ್ನು ಶರಣಾಗತಿಯಂತೂ ಆಲೋಚಿಸಲೂ ಸಾಧ್ಯವಿಲ್ಲ. ಇದರ ಪರಿಣಾಮವಾಗಿ, ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವ ಇಂದಿನ ಬಹುತೇಕ ಜನರು ತಮ್ಮದೇ ಮನಸ್ಸಿನ ಭಾರಿ ಅವ್ಯವಸ್ಥೆಯ ದಾಸರಾಗಿದ್ದಾರೆ.

    ಏನೇ ಆದರೂ ನೀವು ‘ನಾನು’ ಎಂದು ಪರಿಗಣಿಸುವಂತಹದ್ದು ಏನಿದೆ? ನಿಮಗೆ ಗೊತ್ತಿರುವುದೆಲ್ಲ ಹೊರಗಿನಿಂದ ಸಂಗ್ರಹಿಸಿದ ಸಣ್ಣಪುಟ್ಟ ತುಣುಕುಗಳಷ್ಟೆ. ನಿಮ್ಮ ಶರೀರ ಒಂದು ಆಹಾರದ ಸಂಗ್ರಹಣೆಯಾಗಿದೆ ಮತ್ತು ನಿಮ್ಮ ಮನಸ್ಸು ಕೇವಲ ಸಮಾಜದ ಕಸದ ತೊಟ್ಟಿಯಾಗಿದೆ. ನೀವು ‘ನಾನು’ ಎಂದು ಕರೆಯುವ ಯಂತ್ರವ್ಯವಸ್ಥೆಯು ಸ್ವಯಂ-ನಿರ್ವಿುತವಾದದ್ದು, ಏಕೆಂದರೆ ಈಗ ನೀವು ಯಾರಾಗಿದ್ದೀರೋ ಅದು ಹಿಂದಿನ ನೆನಪಾಗಿದೆ. ನೀವು ನಿಮ್ಮಿಂದ ಆದೇಶಗಳನ್ನು ಪಡೆದುಕೊಳ್ಳುತ್ತಿದ್ದೀರೆಂದು ಭಾವಿಸಿಕೊಂಡಿದ್ದೀರಿ, ಆದರೆ ವಾಸ್ತವವಾಗಿ ನೀವು ಲಕ್ಷಾಂತರ ಇತರ ಜನರ ಆಜ್ಞೆಯನ್ನು ಸ್ವಲ್ಪ ಸ್ವಲ್ಪವಾಗಿ ಪಾಲಿಸುತ್ತಿದ್ದೀರಿ ಅಷ್ಟೆ. ಏಕೆಂದರೆ ನೀವು ಸೃಷ್ಟಿಸುವ ಪ್ರತಿಯೊಂದು ಕಲ್ಪನೆ, ಆಲೋಚನೆ, ಭಾವನೆಯು ಎಲ್ಲಿಂದಲೋ ನಿಮಗೆ ಬಂದಿರುತ್ತದೆ. ಒಬ್ಬ ಮನುಷ್ಯನಿಗೆ ತಾನು ದಾಸ್ಯದಲ್ಲಿದ್ದೇನೆ ಎಂಬುದನ್ನು ತಿಳಿದುಕೊಳ್ಳಲು ಅಪಾರವಾದ ಬುದ್ಧಿವಂತಿಕೆ ಬೇಕಾಗುತ್ತದೆ. ಮೂರ್ಖರು ಮಾತ್ರ ತಾವು ಸ್ವತಂತ್ರರು ಎಂದು ನಂಬುತ್ತಾರೆ.

    ಈ ಸೀಮಿತ ಸಾಧ್ಯತೆಯಾದ ಶರೀರ ಮತ್ತು ಮನಸ್ಸಿನ ಆದೇಶಗಳನ್ನು ಪಾಲಿಸುವುದೆಂದರೆ ನೀವು ಕೇವಲ ಹಳೆಯದನ್ನು ಮರುಬಳಕೆ ಮಾಡುವುದು ಮತ್ತು ನಿಮ್ಮ ಮಿತಿಗಳನ್ನು ಆರಾಧಿಸುವುದರಲ್ಲಿ ನಿರತರಾಗಿರುವುದಷ್ಟೆ.

    ಇದನ್ನೂ ಓದಿ: ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

    ಮನುಷ್ಯರು ತಮ್ಮ ಅಂತಿಮ ಸ್ವಾತಂತ್ರ್ಯವನ್ನು ತಲುಪಲು ಸಾಧ್ಯವಾಗದಿರುವುದೇಕೆ? ಒಂದು ಮಾವಿನಹಣ್ಣಿನ ಮರ, ಅದಕ್ಕೆ ಸರಿಯಾದ ಮಣ್ಣು ಮತ್ತು ಪೋಷಣೆ ಸಿಕ್ಕಿದರೆ, ಸಿಹಿಯನ್ನು ಉತ್ಪಾದಿಸುತ್ತದೆ. ಅದನ್ನು ಉತ್ಪಾದಿಸಲು ಮರಕ್ಕೆ ಒಬ್ಬ ಗುರು ಬೇಕಾಗಿಲ್ಲ. ಅಂತಹದ್ದರಲ್ಲಿ, ಈ ಭೂಮಿಯ ಮೇಲೆ ಎಲ್ಲ ಜೀವಿಗಳಿಗಿಂತ ಅತ್ಯಂತ ಸಮರ್ಥ ಎಂದೆನಿಸುವ ಒಬ್ಬ ಮನುಷ್ಯ ಅದನ್ನು ಉತ್ಪಾದಿಸಲು ಏಕೆ ಸಾಧ್ಯವಿಲ್ಲ? ಈ ಮಾಯಾಜಾಲವೇನು? ಈ ಮಾಯಾಜಾಲದ ಸ್ವರೂಪ ಏನು?

    ಈಗ ಮನುಷ್ಯರ ಸ್ವಭಾವ ಹೀಗಿದೆ – ನೀವು ಏನನ್ನು ನಂಬಿಕೊಂಡರೂ ಅದು ವಾಸ್ತವವಾಗಿಬಿಡುತ್ತದೆ. ನೀವು ನೆನಪು, ಕಲ್ಪನೆ ಮತ್ತು ಭಾವನೆಗಳಿಂದ ಕೂಡಿದ ಈ ಸಂಕೀರ್ಣವಾದ ಸೆರೆಮನೆಯನ್ನು ಸ್ವಯಂ ಸಂರಕ್ಷಣೆಗಾಗಿ ನಿರ್ವಿುಸಿಕೊಂಡಿದ್ದೀರಿ. ಆದರೆ ಈ ಸ್ವಯಂ ಸಂರಕ್ಷಣೆಯ ಗೋಡೆಗಳೇ ಸ್ವಯಂ-ಬಂಧನದ ಗೋಡೆಗಳಾಗಿಬಿಟ್ಟಿವೆ. ನಿಮ್ಮ ಶರೀರ ವ್ಯವಸ್ಥೆ ಸಾಫ್ಟ್​ವೇರ್ ಗೋಡೆಗಳನ್ನು ದಾಟಲು ಸನ್ನದ್ದವಾಗಿಲ್ಲ; ಅದು ಕೇವಲ ಗೋಡೆಗಳ ಒಳಗೆ ಕೆಲಸ ಮಾಡಲು ಸನ್ನದ್ಧವಾಗಿದೆ ಅಷ್ಟೆ. ನೀವು ಈಗ ನಿಮ್ಮ ನೆನಪಿನ ಸಂಗ್ರಹದ ಸುಪ್ತ ಸ್ತರಗಳಲ್ಲಿರುವ ಆಯಾಮಗಳನ್ನು ಅರಿಯದೇ ಹೋದರೆ, ಸೆರೆಮನೆಯ ಗೋಡೆಗಳನ್ನು ಮುಟ್ಟಲೂ ಸಹ ನಿಮಗಾಗದು.

    ಇದರ ಫಲವಾಗಿ, ನೀವು ಸೆರೆಮನೆಯ ಒಳಗೇ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಅರಸುವುದರಲ್ಲಿ ನಿರತರಾಗಿರುತ್ತೀರಿ. ಈ ಸೆರೆಮನೆಯ ಒಳಗೆ ಒಂದಿಡೀ ಸಾಮ್ರಾಜ್ಯವನ್ನು ನಡೆಸಲು ಸಾಧ್ಯವಿದೆ! ಒಮ್ಮೆ ನೀವು ಸೆರೆಮನೆಯೊಳಗೆ ಶಕ್ತಿಶಾಲಿಯಾದರೆ, ನೀವು ಎಂದಿಗೂ ಅದರಿಂದ ಹೊರಬರುವ ಪ್ರಯತ್ನ ಮಾಡುವುದಿಲ್ಲ. ಕಡಿಮೆ ಅವಧಿಯ ಶಿಕ್ಷೆಗೊಳಗಾದ ಅಪರಾಧಿಗಳು ಆದಷ್ಟು ಬೇಗ ಹೊರಬರುವ ಕಾತರದಲ್ಲಿರುತ್ತಾರೆ. ಆದರೆ, ಜೀವಾವಧಿ ಶಿಕ್ಷೆಗೊಳಗಾದವರು ಸಾಮ್ರಾಜ್ಯಗಳನ್ನು ಸ್ಥಾಪಿಸಿಕೊಳ್ಳಲು ಮತ್ತು ಸೆರೆವಾಸದ ಜೀವನಕ್ಕೆ ಒಂದು ಅರ್ಥವನ್ನು ಕೊಡಲು ಪ್ರಯತ್ನಿಸುತ್ತಿರುತ್ತಾರೆ. ಹಾಗಾಗಿ, ಹೊರಗಿನ ಸಹಾಯ ಅವಶ್ಯಕವಾಗುತ್ತದೆ, ಏಕೆಂದರೆ ಹೊರಗಿನ ಸಹಾಯವಿಲ್ಲದೆ ಬೇರೊಂದು ಸಾಧ್ಯತೆಯಿದೆ ಎನ್ನುವುದನ್ನೂ ನೀವು ತಿಳಿದುಕೊಳ್ಳುವುದಿಲ್ಲ. ನೀವು ಸುಮ್ಮನೆ ಸೆರೆಮನೆಯ ಗೋಡೆಗಳ ಒಳಗೇ ಸ್ವಾತಂತ್ರ್ಯ ಮತ್ತು ಬಲವನ್ನು ಅರಸುತ್ತಿರುತ್ತೀರಿ.

    ಸಾಮಾನ್ಯವಾಗಿ, ಪ್ರಪಂಚದ ಬಹುತೇಕ ಸೆರೆಮನೆಗಳು ಅತ್ಯಂತ ವ್ಯವಸ್ಥಿತವಾಗಿರುತ್ತವೆ. ಸೆರೆಮನೆಗಳನ್ನು ನಿರ್ವಹಿಸುವ ಜನರಿಗೆ ಈ ವ್ಯವಸ್ಥೆ ಸುರಕ್ಷಿತವಾಗಿರುತ್ತದೆ. ಇದರಿಂದ ಸೆರೆಮನೆಯಲ್ಲಿರುವವರು ತಪ್ಪಿಸಿಕೊಂಡು ಹೋಗುವುದು ಕಷ್ಟಸಾಧ್ಯವಾಗುತ್ತದೆ. ನೀವು ನಿಮ್ಮ ಜೀವನದಲ್ಲಿ ಅತ್ಯಂತ ವ್ಯವಸ್ಥಿತ ಮತ್ತು ನಿಯಂತ್ರಿತರಾಗಿದ್ದರೆ, ಸೆರೆಮನೆಯ ಗೋಡೆಗಳನ್ನು ಒಡೆಯುವುದು ಕಷ್ಟವಾಗುತ್ತಾ ಹೋಗುತ್ತದೆ. ಸೆರೆಮನೆ ಸುರಕ್ಷಿತವಾಗಿದ್ದಷ್ಟೂ, ಸ್ವಾತಂತ್ರ್ಯದಿಂದ ನೀವು ದೂರವಾಗುತ್ತಲೇ ಹೋಗುತ್ತೀರಿ. ಸಂಗತಿಗಳು ಅವ್ಯವಸ್ಥಿತವಾಗಿದ್ದಾಗ, ಗೋಡೆಗಳನ್ನು ಒಡೆದು ಹೋಗುವುದು ಸುಲಭ. ಹಾಗಾಗಿ ಒಂದು ನಿರ್ದಿಷ್ಟ ಮಟ್ಟದ ವ್ಯವಸ್ಥೆ ಮತ್ತು ಅವ್ಯವಸ್ಥೆಯನ್ನು ಜತೆ-ಜತೆಗೇ ನಿರ್ವಹಿಸಬೇಕಾದರೆ ಅಪಾರವಾದ ನಿರ್ವಹಣಾ ಚಾತುರ್ಯ ಬೇಕಾಗುತ್ತದೆ.

    ಇದನ್ನೂ ಓದಿ: ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

    ಸೆರೆಮನೆ ಅತಿಯಾಗಿ ಬಲಗೊಳ್ಳದಂತೆ, ಅವ್ಯವಸ್ಥೆ ಮತ್ತು ಸುವ್ಯವಸ್ಥೆಯನ್ನು ಜತೆ-ಜತೆಗೇ ನಿರ್ವಹಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಅಪಾರವಾದ ಗ್ರಹಿಕೆಯ ಸ್ಪಷ್ಟತೆ ಬೇಕಾಗುತ್ತದೆ ಅಥವಾ ಅದಕ್ಕೆ ಹೊರಗಿನ ಸಹಾಯ ಬೇಕಾಗುತ್ತದೆ. ಅಲ್ಲವಾದರೆ, ಅವ್ಯವಸ್ಥೆಯು ವಿನಾಶಕಾರಿಯಾಗಬಲ್ಲುದು ಮತ್ತು ಸುವ್ಯವಸ್ಥೆ ದಮನಕಾರಿಯಾಗಬಲ್ಲುದು. ಹೀಗಾಗಿಯೇ ಪೂರ್ವದ ಆಧ್ಯಾತ್ಮಿಕ ಸಂಪ್ರದಾಯಗಳು ಜ್ಞಾನೋದಯ ಹೊಂದಿದ ಗುರುಗಳ ಉಪಸ್ಥಿತಿಯನ್ನು ಒತ್ತಿಹೇಳುತ್ತವೆ. ಒಂದೇ ರೀತಿಯ ಮಿತಿಗಳಿಂದ ಬಂಧಿತನಾಗಿರದೇ, ಸ್ವತಂತ್ರನಾಗಿರುವ ವ್ಯಕ್ತಿಯ ಇರುವಿಕೆಯ ಮಹತ್ವವನ್ನು ಪ್ರತಿಪಾದಿಸುತ್ತವೆ.

    ಹೊರಗಿನ ಸಹಾಯವನ್ನು ಕೇಳುವುದು ಅಥವಾ ಅದನ್ನು ಒಬ್ಬರ ಜೀವನದಲ್ಲಿ ಸ್ವೀಕರಿಸುವುದು, ಅದು ಅಯಾಚಿತವಾಗಿ ಬಂದರೆ, ಅದನ್ನು ಸ್ವೀಕರಿಸಲು ಘನತೆ ಮತ್ತು ವಿನೀತಭಾವನೆ ಬೇಕಾಗುತ್ತದೆ. ಬಹುತೇಕ ಜನರು ಏನನ್ನಾದರೂ ಘನತೆಯಿಂದ ಸ್ವೀಕರಿಸಲಾರರು. ಏಕೆಂದರೆ, ಹಾಗೆ ಮಾಡುವುದು ಅವರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಎಂದು ಭಾವಿಸುತ್ತಾರೆ. ಸಾಮಾಜಿಕ ನೈತಿಕತೆಯು ನಮಗೆ ತೆಗೆದುಕೊಳ್ಳುವುದಕ್ಕಿಂತ ಕೊಡುವುದು ಶ್ರೇಷ್ಠ ಎಂಬ ಭಾವನೆಯನ್ನು ಕಲಿಸಿದೆ. ಹೌದು, ತೆಗೆದುಕೊಳ್ಳುವುದು ಕೆಟ್ಟದ್ದು, ಆದರೆ ಸ್ವೀಕರಿಸುವುದು ಬಹಳ ಮಹತ್ವದ್ದು.

    ಶರಣಾಗತಿಯ ಬದಲಾಗಿ, ನಾವು ಕೃತಜ್ಞತೆಯ ಭಾಷೆಯನ್ನು ಬಳಸಲು ಪ್ರಯತ್ನಿಸಬಹುದು. ಮನುಷ್ಯರು ಕೃತಜ್ಞತೆಯಿಂದ ಪರವಶರಾದಾಗ, ಅವರು ಅಪಾರವಾದ ಗ್ರಹಣಶೀಲತೆಯ ಸ್ಥಿತಿಯಲ್ಲಿರುತ್ತಾರೆ. ಮತ್ತು ಗ್ರಹಣಶೀಲನಾಗಿದ್ದಾಗ, ಅನಂತತೆಯ ಕಡೆಗೆ ಮೊದಲ ಹೆಜ್ಜೆಯನ್ನು ಇಟ್ಟಿರುತ್ತಾರೆ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಮಹಿಳೆಯ ಶವ ಪತ್ತೆ; ಪೊಲೀಸ್ ಅಧಿಕಾರಿಗಳ ದೌಡು, ವ್ಯಾಪಕ ಪರಿಶೀಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts