

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ ತಮ್ಮ ವೃತ್ತಿ ಬದುಕಿನಲ್ಲಿ ಸೆರೆಹಿಡಿದಿರುವ ಛಾಯಾಚಿತ್ರಗಳೆಷ್ಟೋ ಲೆಕ್ಕ ಇಟ್ಟವರಿಲ್ಲ. ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಞರು, ಚಿತ್ರರಂಗದ ಪ್ರಮುಖ ಸಭೆ-ಸಮಾರಂಭಗಳ ಕೆಲವು ಅಪರೂಪದ ಫೋಟೋಗಳನ್ನು ಸೆರೆಹಿಡಿದಿರುವ ಅವರು, ಈಗ ಅದನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಛಾಯಾಚಿತ್ರ ಪ್ರದರ್ಶನವು ಸೆ.2ರಿಂದ 4ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ನಡೆಯಲಿದೆ.
ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಹಿರಿಯ ನಟ ಶ್ರೀನಾಥ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ಈ ಪ್ರದರ್ಶನ ನಡೆಯಲಿದೆ. ಅಶ್ವತ್ಥನಾರಾಯಣ ಅವರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು 1965ರಲ್ಲಿ ಬಿಡುಗಡೆಯಾದ ‘ಬೆಳ್ಳಿಮೋಡ’ ಚಿತ್ರದಿಂದ. ಆ ನಂತರ ಸಹೋದರ ನಾಗೇಶ ಬಾಬ ಅವರೊಂದಿಗೆ ಸೇರಿ ಪ್ರಗತಿ ಸ್ಟುಡಿಯೋ ಸ್ಥಾಪಿಸಿ ಈ ಮೂಲಕ ಸ್ಟಿಲ್ ಫೋಟೋಗ್ರಫಿ ಪ್ರಾರಂಭಿಸಿದ ಅವರು, ನಂತರದ ವರ್ಷಗಳಲ್ಲಿ ನಾಲ್ಕು ದಶಕಗಳ ಕಾಲ ಸುಮಾರು 300 ಚಿತ್ರಗಳಿಗೆ ಸ್ಥಿರ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸುವ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಕೆಲವು ಅಪರೂಪದ ಫೋಟೋಗಳು ಈ ಪ್ರದರ್ಶನದಲ್ಲಿ ನೋಡಬಹುದಾಗಿದೆ.