

ಬೆಂಗಳೂರು: ಇಂಜಿನಿಯರಿಂಗ್, ವೃತ್ತಿಪರ, ವೈದ್ಯಕೀಯ ಸೇರಿ ತಾಂತ್ರಿಕ ಕೋರ್ಸ್‌ಗಳಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ರಾಜ್ಯ ಪುರಸ್ಕಾರ ಪರೀಕ್ಷೆ ಪಾಸಾದವರಿಗೆ 300 ಸೀಟ್ ಮೀಸಲಾತಿ ನೀಡುವಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕರ್ನಾಟಕದ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕೇವಲ 15 ಸೀಟ್ ಮಾತ್ರ ಮೀಸಲಾತಿ ಇಡಲಾಗಿದೆ. ಇದು ಸಾಕಾಗುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ 300 ಸೀಟ್ ಮೀಸಲಾತಿ ನೀಡಬೇಕು. ಈ ಬೇಡಿಕೆ ಈಡೇರಿಸುವಂತೆ ಸಲ್ಲಿಸಿರುವ ಮನವಿಗೆ ಸರ್ಕಾರವು ಸಾಕಾರತ್ಮಾಕವಾಗಿ ಸ್ಪಂದಿಸಿದೆ. ಇದರಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಲಿವೆ. ಇದನ್ನು ಯಾವ ರೀತಿಯಲ್ಲಿ ಬಗೆಹರಿಸಬಹುದು ಎಂಬುದನ್ನು ಸರ್ಕಾರ ಆಲೋಚಿಸಿದೆ. ಮುಂದಿನ ದಿನಗಳಲ್ಲಿ ಮೀಸಲಾತಿ ಸೀಟ್ ಹೆಚ್ಚುವ ಸಾಧ್ಯತೆ ಬಗ್ಗೆ ನಮಗೆ ವಿಶ್ವಾಸವಿದೆ.
ಹಿಂದೆ ಕೇಂದ್ರ ಪುರಸ್ಕಾರ ಪರೀಕ್ಷೆ ಬರೆದವರಿಗೆ ಈ ಸೀಟ್ ಪಡೆಯಲು ಅರ್ಹತೆ ಪಡೆಯುತ್ತಿದ್ದರು. ಆದರೆ, ಕೇಂದ್ರ ಸರ್ಕಾರವು ಪುರಸ್ಕಾರ ಪರೀಕ್ಷೆಯನ್ನು ಸದ್ಯ ನಿಲ್ಲಿಸಿದೆ. ಹೀಗಾಗಿ, ರಾಜ್ಯ ಪುರಸ್ಕಾರ ಪರೀಕ್ಷೆ ಬರೆದವರಿಗೆ ಈ ಕೋರ್ಸ್‌ಗಳಲ್ಲಿ ಮೀಸಲಾತಿ ಪಡೆಯಲು ಅರ್ಹತೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ‘ಚಿಣ್ಣರ ದರ್ಶನ’ ಕಾರ್ಯಕ್ರಮ ಜಾರಿ, ಸಸಿಗಳ ನೆಡುವಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಂಬಂಧಪಟ್ಟ ಇಲಾಖೆಗಳ ಸಚಿವರಿಗೆ ಮನವಿ ಪತ್ರ ನೀಡಲಾಗಿದೆ. ಸರ್ಕಾರದಿಂದ ಭಾರತ್ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಉಚಿತವಾಗಿ 2 ಜೊತೆ ಸಮವಸ್ತ್ರ ನೀಡಬೇಕು. ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಶಿಕ್ಷಕರಿಗೆ ಸಂಭಾವನೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ಧಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್, ಅಂತಾರಾಷ್ಟ್ರೀಯ ಮಟ್ಟದ ಮಾನವ ನಿರ್ಮಿತ ಸಂಸ್ಥೆಯಾಗಿದೆ. ದೇಶದ ಎಲ್ಲ ರಾಜ್ಯ, ಜಿಲ್ಲೆ ಹಾಗೂ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆ, ಎಲ್ಲ ಧರ್ಮಗಳಿಗೆ ಗೌರವ ನೀಡುವಿಕೆ ಸೇರಿ ವ್ಯಕ್ತಿತ್ವ ವಿಕಸನ ಬಗ್ಗೆ ಶಾಲಾ ಮಕ್ಕಳಿಗೆ ಕಲಿಸಲಾಗುತ್ತಿದೆ. ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ತಾಲೂಕು, ಜಿಲ್ಲಾ, ರಾಜ್ಯದ ಮಟ್ಟದ ಹಾಗೂ ಶಾಲಾ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳ ಯೋಜನೆಯನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಇದನ್ನು 25 ಸಾವಿರ ಶಿಕ್ಷಕರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ಧಾರೆ.
ಈ ಬಾರಿ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಪ್ರತಿ ತಿಂಗಳು ವಿಶಿಷ್ಟ ಧ್ಯೇಯೋದ್ದೇಶ ಇಟ್ಟುಕೊಂಡು ಸ್ಥಳೀಯ, ಜಿಲ್ಲಾ ಮತ್ತು ರಾಜ್ಯ ಸಂಸ್ಥೆಯ ಹಂತಗಳಲ್ಲಿ ನಿರ್ವಹಿಸಬೇಕಾದ ಮುಖ್ಯ ಕಾರ್ಯಚಟುವಟಿಕೆಗಳು, ತರಬೇತಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ಬನ್ನೀಸ್, ಕಬ್-ಬುಲ್‌ಬುಲ್, ಸ್ಕೌಟ್-ಗೈಡ್, ರೋವರ್-ರೇಂಜರ್ಸ್‌ಗಳ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಸೇವಾ ಮನೋಭಾವ, ಪರೋಪಕಾರ, ಮಾನವೀಯ ಮೌಲ್ಯಗಳು, ಪರಿಸರ ರಕ್ಷಣೆ, ಸುಸ್ಥಿರ ಅಭಿವೃದ್ಧಿ ಗುರಿಗೆ ಜಾಗೃತಿ, ರಾಷ್ಟ್ರೀಯ ಹಬ್ಬಗಳ ಆಚರಣೆ, ಸ್ಥಳೀಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟ ಹಂತಕ್ಕೆ ಬೆಳೆಯವ ಅವಕಾಶ, ಕೌಶಲ ತರಬೇತಿ ನೀಡುವ ಬಗ್ಗೆ ಮಾಹಿತಿಗಳು ಪುಸ್ತಕದಲ್ಲಿವೆ.
ಮಕ್ಕಳ ಪ್ರವೇಶಕ್ಕೆ ಪ್ರಥಮ, ದ್ವಿತೀಯ, ತೃತೀಯ, ರಾಜ್ಯ ಮತ್ತು ರಾಷ್ಟ್ರಪುರಸ್ಕಾರ ಸೇರಿ 7 ಹಂತದ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯಾದ್ಯಂತ 8 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ. ಕಳೆದ ವರ್ಷ 4.5 ಲಕ್ಷ ಸದಸ್ಯತ್ವ ನೋಂದಣಿಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಪ್ರೆಸ್ ಇನ್ಫಾರ್ಮಶನ್ ಬ್ಯೂರೋ(ಪಿಐಬಿ) ಕರ್ನಾಟಕದ ಹೆಚ್ಚುವರಿ ಮಹಾನಿರ್ದೇಶಕ ರವೀಂದ್ರ ಉಪಸ್ಥಿತರಿದ್ದರು.