ಎಚ್ಚರಿಕೆ ನೀಡಲು ಚಾಕು ಕೊಂಡೊಯ್ದಿದ್ದ, ಅದೇ ಚೂರಿಗೆ ತಾನೇ ಬಲಿಯಾದ; 'ಟ್ವಿಸ್ಟ್' ಕೊಲೆ, ನಾಲ್ವರ ಬಂಧನ

pic murder
Published on

ಶಿವಮೊಗ್ಗ: ಇದೊಂಥರ ಕೋಲು ಕೊಟ್ಟು ಪೆಟ್ಟು ತಿಂದಂಥ ಪ್ರಕರಣ. ಜೈಲಿನಿಂದ ಇತ್ತೀಚೆಗೆ ಬಿಡುಗಡೆಗೊಂಡಿದ್ದಲ್ಲದೆ ಗಾಂಜಾ ಪ್ರಕರಣದಲ್ಲಿ ಎದುರಾಳಿ ಗುಂಪಿಗೆ ಎಚ್ಚರಿಕೆ ನೀಡಲು ಹೋಗಿದ್ದ ಯುವಕನೊಬ್ಬ ತಾನೇ ಜತೆಗೆ ಕೊಂಡೊಯ್ದಿದ್ದ ಚಾಕುವಿಗೆ ಬಲಿಯಾಗಿದ್ದಾನೆ. ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ತುಂಗಾನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ನಗರದ ಲತೀಫ್, ರಾಝಿಕ್ ಸೇರಿ ನಾಲ್ವರು ಬಂಧಿತರು. ಮಾರ್ನಮಿಬೈಲ್‌ನ ಇರ್ಫಾನ್ ಅಲಿಯಾಸ್ ಟ್ವಿಸ್ಟ್ (28) ಕೊಲೆಯಾಗಿದ್ದ ಯುವಕ. ಟಿಪ್ಪುನಗರದಲ್ಲಿ ಶನಿವಾರ ರಾತ್ರಿ ಗಾಂಜಾ ಪ್ರಕರಣವೊಂದರಲ್ಲಿ ಯುವಕರ ಗುಂಪೊಂದು ಇರ್ಫಾನ್‌ನನ್ನು ಚಾಕುವಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು.

ತಾನೇ ಕೊಂಡೊಯ್ದಿದ್ದ ಚಾಕು: ಲತೀಫ್‌ಗೆ ಎಚ್ಚರಿಕೆ ನೀಡಲು ಇರ್ಫಾನ್ ಚಾಕು ಕೊಂಡೊಯ್ದಿದ್ದ. ಗಲಾಟೆಯಲ್ಲಿ ಇರ್ಫಾನ್ ಚಾಕುವಿನಿಂದ ಲತೀಫ್ ಮತ್ತವರ ತಂಡದವರಿಗೆ ಇರಿಯಲು ಯತ್ನಿಸಿದ್ದ. ಈ ವೇಳೆ ಚಾಕುವನ್ನು ಕಸಿದುಕೊಂಡ ಎದುರಾಳಿಗಳು ಇರ್ಫಾನ್‌ನ ಎದೆ, ಹೊಟ್ಟೆ ಭಾಗಕ್ಕೆ ಇರಿದಿದ್ದರು. ಇದರಿಂದ ತಾನೇ ಕೊಂಡೊಯ್ದ ಚಾಕುವಿಗೆ ಇರ್ಫಾನ್ ಬಲಿಯಾಗಿದ್ದಾನೆ. ಎಚ್ಚರಿಕೆ ನೀಡಲು ಹೋದವ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?: ಗಾಂಜಾ ಪ್ರಕರಣದಲ್ಲಿ ತಾನು ಜೈಲಿಗೆ ಹೋಗಲು ಲತೀಫ್ ಮತ್ತು ರಾಝಿಕ್ ಮತ್ತವರ ತಂಡವೇ ಕಾರಣವೆಂದು ತಿಳಿದ ಇರ್ಫಾನ್​, ಎಚ್ಚರಿಕೆ ನೀಡಲು ಟಿಪ್ಪುನಗರಕ್ಕೆ ಸ್ನೇಹಿತ ಅಸಾದಿ ಜತೆ ತೆರಳಿದ್ದ. ಟಿಪ್ಪುನಗರ ಬಳಿ ಬಂದಾಗ ಈ ಹಿಂದೆ ದಾಖಲಾಗಿದ್ದ ಗಾಂಜಾ ಪ್ರಕರಣವೊಂದರ ವಿಚಾರದಲ್ಲಿ ಇರ್ಫಾನ್ ಜತೆ ಬಂದಿದ್ದ ಅಸಾದ್ ಮತ್ತು ಸ್ಥಳೀಯ ಶಾಬೀರ್ ಎಂಬುವರ ನಡುವೆ ಜಗಳ ನಡೆದಿತ್ತು. ಅದೇ ಸಮಯದಲ್ಲಿ ಲತೀಫ್, ರಾಝಿಕ್ ಸೇರಿ ಏಳೆಂಟು ಯುವಕರ ಗುಂಪು ಸ್ಥಳದಲ್ಲಿ ಸೇರಿತ್ತು. ಈ ಗಲಾಟೆಯಲ್ಲಿ ಯುವಕರ ಗುಂಪು ಇರ್ಫಾನ್‌ಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ಚರಂಡಿಗೆ ಎಸೆದು ಪರಾರಿಯಾಗಿದ್ದರು. ಘಟನೆಯಲ್ಲಿ ತೀವ್ರ ರಕ್ತಸಾವ್ರದಿಂದ ಇರ್ಫಾನ್ ಸ್ಥಳದಲ್ಲೇ ಮೃತಪಟ್ಟಿದ್ದ. ಜತೆಗೆ ಬಂದಿದ್ದ ಅಸಾದಿ ಕೂಡ ಘಟನೆ ಬಳಿಕ ಸ್ಥಳದಿಂದ ಜಾಗ ಖಾಲಿ ಮಾಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net