ಲೋಡ್ ಶೆಡ್ಡಿಂಗ್, ಪವರ್ ಕಟ್‌ಗೆ ಶಾಶ್ವತ ಪರಿಹಾರ

Ull_Mescom
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರದೇಶಾಭಿವೃದ್ಧಿಯಲ್ಲಿ ರಸ್ತೆ, ನೀರು ಸಹಿತ ಇತರ ಸೌಕರ್ಯಗಳಿಗಿಂತಲೂ ನಿರಂತರ ವಿದ್ಯುತ್ ಸರಬರಾಜು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಕ್ಷೇತ್ರದಲ್ಲಿ ಲೋಡ್ ಶೆಡ್ಡಿಂಗ್, ಪವರ್ ಕಟ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಜೆಪ್ಪು ಉಪಕೇಂದ್ರದಿಂದ ಮೆಸ್ಕಾಂ ತೊಕ್ಕೊಟ್ಟು ಉಪಕೇಂದ್ರಕ್ಕೆ 5.73 ಕೋಟಿ ರೂ.ವೆಚ್ಚದಲ್ಲಿ ಭೂಗತ ಕೇಬಲ್ ಮತ್ತು 1.54 ಕೋಟಿ ರೂ. ವೆಚ್ಚದ ತೊಕ್ಕೊಟ್ಟು ಉಪಕೇಂದ್ರದ 12.5 ಎಂವಿಎ ಸಾಮರ್ಥ್ಯಕ್ಕೆ ಪರಿವರ್ತಿಸಲಾದ ಪರಿವರ್ತಕಕ್ಕೆ ಶನಿವಾರ ತೊಕ್ಕೊಟ್ಟು ಉಪಕೇಂದ್ರದಲ್ಲಿ ಪರೀಕ್ಷಾರ್ಥ ಚಾಲನೆ ನೀಡಿ ಮಾತನಾಡಿದರು.

ಶೀಘ್ರ ಟೆಂಡರ್

ಹಿಂದೆ ಕಾವೂರಿನಿಂದ ಕೊಣಾಜೆ ಫೀಡರ್‌ಗೆ ವಿದ್ಯುತ್ ಬಂದು ಬಳಿಕ ಕೊಣಾಜೆಯಿಂದ ಚೆಂಬುಗುಡ್ಡೆಗೆ 20 ಕೆ.ವಿ. ವಿದ್ಯುತ್ ಬಂದು ಕೋಟೆಕಾರ್‌ಗೂ ಪೂರೈಕೆಯಾಗುತ್ತಿತ್ತು. ಇದನ್ನು 20 ಕೆ.ವಿ.ಯಿಂದ 40 ಕೆ.ವಿ.ಗೆ ಪರಿವರ್ತಿಸಲಾಗಿದೆ. ಕೊಣಾಜೆಯಲ್ಲಿ ವಿದ್ಯುತ್ ಕೊರತೆಯಾದರೆ ಜಪ್ಪಿನಮೊಗರುವಿನಿಂದ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆ ಎದುರಾದಾಗಲೂ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. 110 ಕೆ.ವಿ.ಗೆ ಶೀಘ್ರ ಟೆಂಡರ್ ಆಗಲಿದೆ. ಉಳ್ಳಾಲದಲ್ಲಿ 180 ಕೋಟಿ ರೂ. ಹಾಗೂ ದೇರಳಕಟ್ಟೆಯಲ್ಲಿ ಎಂಟು ಕೋಟಿ ರೂ.ನಲ್ಲಿ ಅಂಡರ್ ಗ್ರೌಂಡ್ ಕೇಬಲ್ ವ್ಯವಸ್ಥೆ ಆಗಲಿದೆ ಎಂದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ನಗರ ಸಭಾಧ್ಯಕ್ಷೆ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಇಬ್ರಾಹಿಂ, ಸದಸ್ಯರಾದ ಯು.ಪಿ.ಅಯೂಬ್ ಮಂಚಿಲ, ಬಾಝಿಲ್ ಡಿಸೋಜ, ಯು.ಬಿ.ರಾಜೇಶ್, ವೀಣಾ ಡಿಸೋಜ, ಆಯುಕ್ತ ಮತ್ತಡಿ, ಮುಖ್ಯ ಇಂಜಿನಿಯರ್ ರವಿಕಾಂತ್ ಕಾಮತ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮಹಮ್ಮದ್ ರಫೀಕ್, ವಕ್ಫ್ ಬೋರ್ಡ್ ಸದಸ್ಯರಾದ ಅಬ್ದುಲ್ ರಹ್ಮಾನ್, ರಝಿಯಾ ಇಬ್ರಾಹಿಂ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಟಿ.ಎಸ್.ಅಬೂಬಕ್ಕರ್, ಸುದರ್ಶನ್ ಶೆಟ್ಟಿ, ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಸುಹಾಸಿನಿ ಉಪಸ್ಥಿತರಿದ್ದರು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಯಾನಂದ ಪ್ರಸ್ತಾವನೆಗೈದರು. ರೋಹಿತ್ ಉಳ್ಳಾಲ್ ನಿರೂಪಿಸಿದರು.

ತೂಗುಸೇತುವೆ ಕಾಮಗಾರಿ ಶೀಘ್ರ

ಉಳ್ಳಾಲಕ್ಕೆ ಬೇಕಾಗಿದ್ದ ಮಹಿಳಾ ಕಾಲೇಜು, ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿದೆ. ಪಾವೂರು ಉಳಿಯದಲ್ಲಿ ತೂಗುಸೇತುವೆ ಕಾಮಗಾರಿ ಕೊನೆ ಹಂತದಲ್ಲಿದ್ದು ಶೀಘ್ರ ಮಾಡಿಸುತ್ತೇನೆ. ಕಲ್ಲಾಪುವಿನಿಂದ ನೇರವಾಗಿ ಸಜಿಪವರೆಗೆ ರಸ್ತೆ ನಿರ್ಮಾಣದ ಕನಸು ಇದೆ ಎಂದು ಖಾದರ್ ತಿಳಿಸಿದರು.

ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮದ ಸಹೋದರರು ಕೈಕೈ ಹಿಡಿದು ನಡೆದಾಡಬೇಕು. ಕೆಲವರು ಸಮಾಜ ಒಡೆಯಲು ಪ್ರಯತ್ನಿಸುತ್ತಾರೆ, ಸಮಾಜ ಒಡೆಯಲು ಒಬ್ಬ ಸಾಕು. ಆದರೆ ಸಮಾಜ ಕಟ್ಟಲು ಎಲ್ಲರ ಸಹಕಾರ ಬೇಕಿದ್ದು ಕ್ಷೇತ್ರದ ಪ್ರತಿಯೊಬ್ಬರೂ ಸಮಾಜ ಕಟ್ಟುವ ರಾಯಭಾರಿಗಳಾಗಬೇಕು ಯು.ಟಿ.ಖಾದರ್, ಸ್ಪೀಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net