ಹೊಸಮಾರು ಶಾಲೆಗೆ ಶಾಶ್ವತ ಬೀಗ !

blm (1)
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ ಆಂಗ್ಲ ಮಾಧ್ಯಮದ ವ್ಯಾಮೋಹ, ಕನ್ನಡ ಮಾಧ್ಯಮದ ತಾತ್ಸಾರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೊರತೆ ಕಾರಣಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಸರ್ಕಾರಿ ಶಾಲೆಯೊಂದಕ್ಕೆ ಎರಡು ವರ್ಷಗಳ ಹಿಂದೆ ಬೀಗ ಜಡಿಯಲಾಗಿದೆ. ಬೆಳ್ಮಣ್ ದುರ್ಗಾಪರಮೇಶ್ವರಿ ದೇಗುಲದ ಸಮೀಪದಲ್ಲಿರುವ ಹೊಸಮಾರು ಸರ್ಕಾರಿ ಪ್ರಾಥಮಿಕ ಶಾಲೆಗೆ ಎದುರಾದ ಶೋಚನೀಯ ಪರಿಸ್ಥಿತಿ ಇದು. 1ರಿಂದ 7ನೇ ತರಗತಿ ತನಕ ತರಗತಿಗಳಿದ್ದು, ಅಬ್ಬನಡ್ಕ, ಹೊಸಮಾರು, ನಡಿಗುತ್ತು ಸಹಿತ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅಲ್ಲದೇ ಈ ಭಾಗದಲ್ಲಿರುವ ಗಣ್ಯ ವ್ಯಕ್ತಿಗಳೆಲ್ಲರೂ ಬಹುತೇಕ ಇದೇ ಶಾಲೆಯಲ್ಲಿ ಕಲಿತವರು. ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ಒಬ್ಬೊಬ್ಬರೇ ವರ್ಗಾವಣೆಯಾಗುತ್ತಿದ್ದು, ಪಾಲಕರೂ ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಹತ್ತಕ್ಕಿಂತಲೂ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ಇದ್ದುದರಿಂದ ಶಾಲಾ ಕಾರ್ಯವೈಖರಿ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯೂ ಶಾಲೆ ಮುಚ್ಚಲು ನಿರ್ಧರಿಸಿತ್ತು. *ಪಾಳು ಬಿದ್ದ ಕಟ್ಟಡ: ಕೆಲವು ಪಾಲಕರು, ಸ್ಥಳೀಯರು ಹಾಗೂ ದಾನಿಗಳ ನೆರವಿನಿಂದ ಶಾಲೆಯಲ್ಲಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಬಹಳ ವರ್ಷಗಳ ಹಿಂದೆ ನಿರ್ಮಾಣವಾದ ಶಾಲೆಯ ಒಂದು ಭಾಗ ಶಿಥಿಲಗೊಂಡಿದ್ದು, ಅಸಮರ್ಪಕ ನಿರ್ವಹಣೆಯಿಂದಾಗಿ ಮೇಲ್ಛಾವಣಿಯ ಭಾಗಗಳು, ಹಂಚುಗಳು ಮುರಿದು ಬೀಳಲಾರಂಭಿಸಿದೆ. ಇದೇ ಕಟ್ಟಡಕ್ಕೆ ತಾಗಿಕೊಂಡು ಅಂಗನವಾಡಿಯೂ ಕಾರ್ಯನಿರ್ವಹಿಸುತ್ತಿದೆ. ಬೀಗ ಜಡಿದು ಇತಿಹಾಸ ಪುಟ ಸೇರುವ ಮೊದಲೇ ಈ ಶಾಲೆಯ ಉಳಿವಿಗೆ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮರುಆರಂಭಕ್ಕೆ ಭಾರಿ ಕಸರತ್ತು

ಶಾಲೆಯ ಮರು ಆರಂಭಕ್ಕೆ ಹಾಗೂ ವಿದ್ಯಾರ್ಥಿಗಳ ಹೆಚ್ಚು ಆಕರ್ಷಿಸಲು ಈ ಹಿಂದೆಯೇ ವಿವಿಧ ರೀತಿಯ ಬ್ಯಾನರ್‌ಗಳನ್ನು ಅಳವಡಿಸಿ ಪ್ರಯತ್ನ ಮಾಡಲಾಗಿತ್ತಾದರೂ ವಿಫಲವಾಗಿತ್ತು. ಆದರೂ ಹಳೇ ವಿದ್ಯಾರ್ಥಿಗಳ ಸಂಘ ಶಾಲೆಯ ಉಳಿವಿಗೆ ಭಗೀರಥ ಪ್ರಯತ್ನ ಮಾಡುತ್ತಿದ್ದು, ಸ್ಥಳೀಯ ವಿದ್ಯಾರ್ಥಿಗಳನ್ನು ಒಂದುಗೂಡಿಸಲು ಶ್ರಮಿಸುತ್ತಿದೆ. ಹೀಗಿದ್ದರೂ ಶಾಲೆಯ ಬೀಗ ತೆರೆಯುವುದು ಬಹುತೇಕ ಅನುಮಾನವಾಗಿದ್ದು, ಇನ್ನೊಂದು ವರ್ಷದೊಳಗೆ ಅತಿ ಹೆಚ್ಚಿನ ವಿದ್ಯಾರ್ಥಿಗಳನ್ನು ಒಂದುಗೂಡಿಸಿದರೆ ಮಾತ್ರ ಶಾಲೆ ಮತ್ತೆ ಕಾರ್ಯ ಆರಂಭಿಸಲಿದೆ.

ಒಂದು ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶಾಲೆಯೊಂದು ಬಾಗಿಲು ಮುಚ್ಚಿರುವುದು ಬಹಳ ಬೇಸರದ ಸಂಗತಿ. ಒಂದೆಡೆ ಆಂಗ್ಲ ಮಾಧ್ಯಮದ ಭರಾಟೆ, ಶಿಕ್ಷಕರ ಕೊರತೆ ಹಾಗೂ ವಿದ್ಯಾರ್ಥಿಗಳ ಸಂಖೆಯಲ್ಲಿ ಕುಂಠಿತದಿಂದ ಈ ಸಮಸ್ಯೆಯಾಗಿದೆ. -ಯೋಗಿಶ್ ದೇವಾಡಿಗ, ಹಳೇ ವಿದ್ಯಾರ್ಥಿ ಶಾಲೆಯನ್ನು ಮತ್ತೆ ಆರಂಭಿಸಬೇಕು ಎನ್ನುವ ಚಿಂತನೆಯಿಂದ ಹಳೇ ವಿದ್ಯಾರ್ಥಿ ಸಂಘ ಶ್ರಮಿಸುತ್ತಿದೆ. ಮುಂದೆ ಒಂದಷ್ಟು ವಿದ್ಯಾರ್ಥಿಗಳ ದಾಖಲಾತಿ ಮಾಡುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಮುಚ್ಚಿದ ಶಾಲೆ ಬಾಗಿಲು ಮತ್ತೆ ತೆರೆದುಕೊಳ್ಳುವಂತೆ ಮಾಡಲು ಶ್ರಮಿಸುತ್ತಿದ್ದೇವೆ. -ಸಂದೀಪ್ ಅಂಚನ್, ಹಳೇ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net