ಸಾಲ ಪಡೆದ ಜನರು ಆತಂಕ್ಕೊಳಗಾಗಿ ತಪ್ಪು ನಿರ್ಧಾರ ಕೈಗೊಳ್ಳಬೇಡಿ: CM ಸಿದ್ದರಾಮಯ್ಯ ಮನವಿ

dk (43)
Published on

ಬೆಂಗಳೂರು:ಆರ್​ಬಿಐ ನಿಯಮಾವಳಿ ಉಲ್ಲಂಘಿಸುವ, ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದ್ದು, ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಸಿಎಂ(CM )ಸಿದ್ದರಾಮಯ್ಯ ಮನವಿ ಮಾಡಿದರು.

ಮೈಸೂರುನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಮೈಕ್ರೋ ಫೈನಾನ್ಸ್ ನಿಂದ ಜನರಿಗಾಗುತ್ತಿರುವ ತೊಂದರೆ ಹಾಗೂ ಬಿಜೆಪಿಯವರು ರಾಜ್ಯದಲ್ಲಿ ಗೂಂಡಾ ರಾಜ್ಯವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಇದೆ ಎಂದುರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ. 28 ರಿಂದ 30 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಲಾಗಿದೆ. ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ ನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್ ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಧ್ಯದಲ್ಲಿಯೇ ಸುಗ್ರೀವಾಜ್ಞೆಯನ್ನು ಹೊರಡಿಸಲಿದ್ದು, ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಬಾಲಿಶ ಹೇಳಿಕೆ

ಕುಂಭಮೇಳದ ಬಗ್ಗೆ ಟೀಕೆ ಮಾಡುವವರು ಅಯೋಗ್ಯರು ಎಂದು ಪ್ರತಿಪಕ್ಷ ನಾಯಕರಾದ ವಿಜಯೇಂದ್ರರವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ತಪ್ಪು ನಡೆದಾಗ ಟೀಕೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರುತ್ತದೆ. ವಿಜಯೇಂದ್ರರವರ ಹೇಳಿಕೆ ಬಾಲಿಶವಾಗಿದೆ ಎಂದರು.

ಮುಡಾಪ್ರಕರಣ ರಾಜಕೀಯ ಪ್ರೇರಿತ

ಮುಡಾಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವರದಿ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾರಿನಿರ್ದೇಶನಾಲಯದ ವರದಿ ರಾಜಕೀಯಪ್ರೇರಿತವಾಗಿದೆ. ಮನಿಲ್ಯಾಂಡ್ರಿಂಗ್ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲ. ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಇಡಿಯವರ ಕ್ರಮ ಕಾನೂನು ಬಾಹಿರ ಮತ್ತು ಮನಿಲ್ಯಾಂಡ್ರಿಂಗ್ ಅಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಡಿಯ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಪ್ರೇರಿತವಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ ಎಂದರು.

ವರಿಷ್ಠರ ತೀರ್ಮಾನವೇ ಅಂತಿಮ

ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ಪಕ್ಷದ ನಾಯಕರು ಸಭೆ ಮಾಡುವುದರಲ್ಲಿ ಯಾವುದೇ ರಾಜಕೀಯವಿಲ್ಲ. ಸತ್ಯಕ್ಕೆ ವಿರುದ್ಧವಾದ ಊಹೆಗಳು ತಪ್ಪು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net