

ಬೆಳಗಾವಿ: ಪಕ್ಕದ ಗೋವಾ ರಾಜ್ಯದಿಂದ ಅಕ್ರಮವಾಗಿ ವಾಹನವೊಂದರಲ್ಲಿ ವಿವಿಧ ಕಂಪನಿಯ ಮದ್ಯದ ಬಾಕ್ಸ್ಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಸೋಮವಾರ ಬಂಧಿಸಿರುವ ಉದ್ಯಮಭಾಗ ಠಾಣೆ ಪೊಲೀಸರು, 3.70 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಬೆಳಗಾವಿ ನಗರದ ಫೋರ್ಟ್ ರಸ್ತೆಯ ನಿವಾಸಿಗಳಾದ ಮಂಜುನಾಥ ಪಾಟೀಲ (35), ಸುಭಾಷ ಸುಧಿರಡೆ (34) ಬಂಧಿತರು.
ಲಾಕ್ಡೌನ್ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ದಿನಸಿ ವಸ್ತುಗಳು ಮತ್ತು ತರಕಾರಿ ಸಮಸ್ಯೆ ಉಂಟಾಗಬಾರದೆಂದು ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ತರಕಾರಿ ಸಾಗಿಸಲು ರಾಜ್ಯ ಸರ್ಕಾರವು ಸರಕು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ, ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದ ವಾಹನ ಚಾಲಕರು ಸುಲಭವಾಗಿ ಹಣ ಗಳಿಸಲು ತರಕಾರಿ ಚೀಲಗಳ ತಳಭಾಗದಲ್ಲಿ ಮದ್ಯದ ಬಾಕ್ಸ್ಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದರು.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ನಗರದ 3ನೇ ರೈಲ್ವೆ ಗೇಟ್ ಬಳಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋವನ್ನು ಪತ್ತೆ ಮಾಡಿ, ವಶಕ್ಕೆ ಪಡೆದರು.