

ಬೆಂಗಳೂರು:ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಚ್ ಮಾಡಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಇನ್ನುಮುಂದೆ ಮೀಸಲಾತಿಗಾಗಿ ಮನವಿ ಮಾಡುವುದಿಲ್ಲ. ಬದಲಿಗೆ ಸರ್ಕಾರದ ಅನ್ಯಾಯವನ್ನು ಜನರ ಮುಂದೆ ಇಡಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುಡುಗಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿ, ಈಗಾಗಲೇ ಮಾಡುತ್ತಿರುವ ನಮ್ಮ ಹೋರಾಟವು ಮುಂದಿನ 3 ವರ್ಷ ಮುಂದುವರಿಯಲಿದೆ. ಪ್ರತಿ ಕ್ಷೇತ್ರಕ್ಕೂ ತೆರಳುತ್ತೇವೆ. ನಮಗೆ ಪ್ರೀತಿ ಕೊಟ್ಟವರಿಗೆ ಸಹಕಾರ ನೀಡುತ್ತೇವೆ. ಮೇ.18ರಿಂದ ಪ್ರತಿ ಹಳ್ಳಿಗೆ ಪ್ರವಾಸ ಕೈಗೊಳ್ಳುತ್ತೇವೆ. ಜನರ ನಿಲುವುವನ್ನು ಸಂಗ್ರಹ ಮಾಡುತ್ತೇವೆ. ಸರ್ಕಾರದ ಧೋರಣೆಯನ್ನು ಸಮುದಾಯದ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿದ ಪ್ರಕರಣ ಕುರಿತ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿಯ್ಬೊಬರ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಲ ಮಿತಿಯಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆದೇಶಿಸಿದೆ. ಇದು ಹೋರಾಟಗಾರರಿಗೆ ಸಿಕ್ಕ ಜಯವಾಗಿದೆ. 4 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದವು. ಬಸವರಾಜ ಬೊಮ್ಮಾಯಿ ಸರ್ಕಾರ "2ಎ'ಮೀಸಲಾತಿ ನೀಡಿತ್ತು. ಆದರೆ,ಈಗಿನ ಸಿದ್ದರಾಮಯ್ಯ ಸರ್ಕಾರ ಅದನ್ನು ಮಾಡಿಲ್ಲ ಎಂದರು.
ಸೌಜನ್ಯಕ್ಕೂ ಸಿಎಂ ಸ್ಪಂದಿಸಿಲ್ಲ: ಕಳೆದ ವರ್ಷದ ಚಳಿಗಾಲದ ಅಧಿವೇಶನದ ವೇಳೆ ಬೆಳಗಾಯಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದವು. ಇದು ಶಾಂತಿಯುತ ಹೋರಾಟವಾಗಿತ್ತು. ಸರ್ಕಾರವು ಪೊಲೀಸರ ಮೂಲಕ ಹೋರಾಟಗಾರರಿಗೆ ಧಮ್ಕಿ ಹಾಕಿಸಿತು. ಬರುವ ವಾಹನಗಳ ಪರವಾನಗಿ ರದ್ದು ಮಾಡುವುದಾಗಿ ಬೆದರಿಕೆ ಹಾಕಿಸಿತ್ತು. ಆದರೆ. ಇದ್ಯಾವದಕ್ಕೆ ಸಮುದಾಯದ ಜನರು ಮಣೆಹಾಕದೆ 2024ರ ಡಿ.10ರಂದು ಸುವರ್ಣಸೌಧದ ಬಳಿ ಹೋರಾಟ ಕೈಗೊಂಡೆವು. ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿತು. ಸಾವಿರಾರು ಸಂಖ್ಯೆಯ ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಹಲ್ಲೆ ಮಾಡಿದರು. ಬ್ರಿಟಿಷರು, ಸ್ವಾತಂತ್ರ್ಯ ಹೋರಾಟಗಾರರ ರೀತಿ ಯುದ್ಧ ಆಯಿತು. ಲಿಂಗಾಯತರದು ಬಹಳ ಆಗಿದೆ ಎಂದು ಹೊಡೆಸಿದರು. ಅದಾದ ಮೇಲೆ ಸಿಎಂ ಕ್ಷೇಮೆ ಕೇಳಬೇಕು ಎಂದು ಧರಣಿ ನಡೆಸಿದೆವು. ಆದರೆ ಸೌಜನ್ಯಕ್ಕೂ ಸಿಎಂ ಸ್ಪಂದಿಸಿಲ್ಲ ಎಂದು ಶ್ರೀಗಳು, ಸರ್ಕಾರದ ವಿರುದ್ಧ ಕಿಡಿಕಾರಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಖಂಡಿಸಿ ಏ.6 ರಂದು ಬೆಂಗಳೂರಿನ ಟೌನ್ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಏ.10ರೊಳಗೆ ಉಚ್ಚಾಟನೆ ತೀರ್ಮಾನವನ್ನು ಹಿಂಪಡೆಯದಿದ್ದರೆ ಮೇ.11ರಂದು ವಿಜಯಪುರದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಬಿಜೆಪಿಯಲ್ಲಿ ಕೆಲ ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ವೀರಶೈವ&ಸಮುದಾಯದ ಮೇಲೆ ನಿರಂತರವಾಗಿ ಅನ್ಯಾಯ ನಡೆದರೆ ಸಹಿಸಲ್ಲ.
| ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ,
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ.