ಭಗವಾನ್ ಮಹಾವೀರರ ಸಂದೇಶದಿಂದ ನೆಮ್ಮದಿ ಲಭ್ಯ; ಸಚಿವ ಶಿವರಾಜ ತಂಗಡಗಿ ಅಭಿಮತ

mahaveer
Published on

ಬೆಂಗಳೂರು: ಮಹಾಪುರುಷರ ಸಂದೇಶಗಳಿಂದ ಭಾರತ ದೇಶ ನೆಮ್ಮದಿಯಿಂದ ಇದೆ. ಈ ಪುಣ್ಯದ ಲ ವಿದೇಶಗಳಿಗಿಲ್ಲದ್ದರಿಂದಲೇ ಜಾಗತಿಕ ಯುದ್ಧಗಳು ನಡೆಯುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಶ್ರೀಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಗವಾನ್ ಮಹಾವೀರರು ಸಾರಿರುವ ಶಾಂತಿ ಸಂದೇಶ ಸಾರ್ವಕಾಲಿಕ ಸತ್ಯವಾಗಿದೆ. ಭಾರತ ದೇಶ ನೆಮ್ಮದಿಯಾಗಿ ಇರುವುದಕ್ಕೆ ಕಾರಣ ಬುದ್ಧ, ಬಸವ, ಮಹಾವೀರ, ಕನಕದಾಸ, ವಾಲ್ಮೀಕಿ ಇತ್ಯಾದಿ ಮಹಾಪುರುಷರ ಪುಣ್ಯದ ಲ. ಈ ಅವಕಾಶ ಇತರೆ ರಾಷ್ಟ್ರಗಳಿಗೆ ಇಲ್ಲ ಆದ್ದರಿಂದಲೇ ಜಾಗತಿಕ ಅಶಾಂತಿಯ ವಾತಾವರಣ ಇದೆ. ಆ ಕಾರಣದಿಂದಲೇ ಮಹಾಪುರಷರ ಜಯಂತಿಗಳನ್ನು ಪ್ರತಿವರ್ಷ ಮಾಡಬೇಕಾಗಿದೆ. ಇದರಿಂದ ನಮ್ಮ ಯುವ ಪೀಳಿಗೆಗೆ ಅವರ ಸಂದೇಶಗಳನ್ನು ತಿಳಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತಿಹೆಚ್ಚು ಮಹಾತ್ಮರ ಜಯಂತಿಗಳಿಗೆ ಆದೇಶ ಮಾಡಿದ್ದಾರೆ. ಮಹಾವೀರರ ಜಯಂತಿಯನ್ನು ಆರಂಭಿಸಿದ್ದು ಕೂಡ ಸಿದ್ದರಾಮಯ್ಯನವರೇ ಎಂದು ಸಚಿವರು ವಿವರಿಸಿದರು.

ಜೈನ ಸಮುದಾಯದ ಆಶೀರ್ವಾದ ನಮ್ಮ ಪಕ್ಷದ ಮೇಲೆ ಬಹಳ ಇದೆ. ಈ ಹಿಂದೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿಯವರು 1978ರಲ್ಲಿ ಎನ್.ಆರ್.ಪುರ ತಾಲೂಕಿನ ಸಿಂಹನಗದ್ದೆ ಜೈನಮಠದ ಜ್ವಾಲಮಾಲಿನಿ ಅಮ್ಮನವರ ದರ್ಶನಕ್ಕೆ ಬಂದಾಗ ಅಲ್ಲಿದ್ದ ಶ್ರೀ ವಿದ್ಯಾನಂದ ಮುನಿಗಳು ಪಕ್ಷಕ್ಕೆ ಹಸ್ತದ ಗುರುತನ್ನು ನೀಡಿದ್ದರು ಎಂದು ಸಚಿವರು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತೆ, ವಾದದಿಂದ ಯುದ್ಧಗಳು ನಡೆಯುತ್ತವೆ. ಸಂವಾದದಿಂದ ಶಾಂತಿ ಸ್ಥಾಪನೆಯಾಗುತ್ತದೆ. ನಾವು ಹೇಳುವುದೇ ಸತ್ಯ ಎಂಬುವ ಬದಲು ಇತರರ ಮಾತಿನಲ್ಲೂ ಸತ್ಯ ಇರಬಹುದೆಂಬ ಅನೇಕಾಂತ ತತ್ವದ ಮೂಲಕ ಅಹಿಂಸಾ ಸಂದೇಶವನ್ನು ಸಾರಿರುವ ಭಗವಾನ್ ಮಹಾವೀರರ 2624ನೇ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಅಭಿನಂದನಾರ್ಹ ಎಂದರು.

ಸಮಾರಂಭದಲ್ಲಿ ಸಿಂಹನಗದ್ದೆ ಜೈನಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜ್ಯಸಭಾ ಸಂಸದ ಲೆಹರ್ ಸಿಂಗ್, ಜೈನ ಸಮಾಜದ ಮುಖಂಡ ಜಿತೇಂದ್ರ ಕುಮಾರ್, ಇಲಾಖೆ ನಿರ್ದೇಶಕಿ ಡಾ.ಗಾಯಿತ್ರಿ ದೇವಿ ಮತ್ತಿತರರು ಉಪಸ್ಥಿತರಿದ್ದರು.

"ಜೈನಧರ್ಮದ ಸಂದೇಶಗಳು ಇತರರ ಮೇಲೂ ಪ್ರಭಾವ ಬೀರುತ್ತಿವೆ. ಸರ್ಕಾರ ಈ ವರ್ಷ ಜೈನರ ಕಲ್ಯಾಣಕ್ಕೆ 100 ಕೋಟಿ ಅನುಧಾನ ಇಟ್ಟಿದೆ. ರಾಜ್ಯದಲ್ಲಿರುವ ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಅಧಿವೇಶನದಲ್ಲಿ ಜೈನ ಸಮಾಜದ ಬೇಡಿಕೆಯಾಗಿರುವ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪ್ರಯತ್ನ ನಡೆದಿದೆ.”

-ಡಿ.ಸುಧಾಕರ, ಯೋಜನೆ ಮತ್ತು ಸಾಂಖ್ಯಿಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net