

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅವಿಶ್ವಾಸ ನಿರ್ಣಯದ ನೋಟಿಸ್‌ಗೆ ಸದಸ್ಯರು ಮಾಡುವ ಸಹಿಗಳನ್ನು ಪಿಡಿಒಗಳು ದೃಢೀಕರಿಸುವಂತಿಲ್ಲ(PDOs cannot attest to the signature of the no-confidence motion notice) ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ.
ಅವಿಶ್ವಾಸ ನಿರ್ಣಯ ಮಂಡನೆಯ ನಿಯಮಗಳ ನಮೂನೆ-1 ರಲ್ಲಿ ಸದಸ್ಯರ ಸಹಿಗಳನ್ನು ಪಿಡಿಒಗಳು ದೃಢೀಕರಿಸಿರುವುದಕ್ಕೆ ಹೈಕೋರ್ಟ್ ಆಕ್ಷೇಪದ ಹಿನ್ನೆಲೆಯಲ್ಲಿ ಸಹಿ ದೃಢೀಕರಿಸಿದ ಒಬ್ಬ ಪಿಡಿಒ ಅಮಾನತಿಗೂ ಸೂಚನೆ ನೀಡಲಾಗಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು ಅವಿಶ್ವಾಸ ಸೂಚನೆಯ ನಿರ್ಣಯವನ್ನು ಮಂಡಿಸಲು ಉದ್ದೇಶಿಸಿ, ಸಭೆಯನ್ನು ಆಯೋಜಿಸುವಂತೆ ಉಪವಿಭಾಗದಿಕಾರಿಗಳಿಗೆ ಸಲ್ಲಿಸಲಾಗಿದ್ದ ನಮೂನೆ-1 ರಲ್ಲಿನ ನೋಟೀಸ್ ಅನ್ನು ಕಲಬುರಗಿ ನ್ಯಾಯಪೀಠ ರದ್ದುಪಡಿಸಿದೆ. ಅಲ್ಲದೆ, ನಮೂನೆ-1 ರಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರ ಸಹಿಯನ್ನು ದೃಢೀಕರಿಸಿರುವ ಪಂಚಾಯಿತಿ ಪಿಡಿಒ ಕ್ರಮವನ್ನು ಆಕ್ಟೇಪಿಸಿದೆ.
ಅಲ್ಲದೆ, ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕುಣಿಮೆಳ್ಳಿಹಳ್ಳಿ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆಗೆ ಉಪವಿಭಾಗಾಧಿಕಾರಿಗಳಿಗೆ ಗ್ರಾ.ಪಂ. ಸದಸ್ಯರು ಸಲ್ಲಿಸಿರುವ ನಮೂನೆ-1 ರ ನೋಟೀಸಿನಲ್ಲಿನ ಸದಸ್ಯರು ಹಾಗೂ ಅವರುಗಳ ಸಹಿಯನ್ನು ಪಿಡಿಒ ದೃಢೀಕರಿಸಿರುವುದನ್ನು ಧಾರವಾಡ ಪೀಠವು ಸಹ ಆಕ್ಷೇಪಿಸಿ, ಇವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕುಣಿಮೆಳ್ಳಿಹಳ್ಳಿ ಗ್ರಾ.ಪಂ. ಪಿಡಿಒ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಆಮಾನತು ಮಾಡಿ ಅದರ ಮಾಹಿತಿಯನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾವೇರಿ ಜಿ.ಪಂ. ಸಿಇಒಗೆ ಸೂಚಿಸಿದೆ.