

ಆಲ್ದೂರು: ನಿವೇಶನ ಫಲಾನುಭವಿಯೊಬ್ಬರ ಮನೆ ಮಂಜೂರಾತಿ ಕುರಿತು ಆಲ್ದೂರು ಪಿಡಿಒ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಮುಂದೆ ಡಿಎಸ್‌ಎಸ್ ಕಾರ್ಯಕರ್ತರು ಧರಣಿ ನಡೆಸಿದರು.
ಗ್ರಾಪಂನಲ್ಲಿ ಸೋಮವಾರ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆಯೇ ಡಿಎಸ್‌ಎಸ್‌ನಿಂದ ಪ್ರತಿಭಟನೆ ನಡೆಸಿದರು. ಆಲ್ದೂರಿನ ರೈಸ್‌ಮಿಲ್ ರಸ್ತೆ ಸಗನಮ್ಮ ಅವರಿಗೆ ಚಿಕ್ಕಮಾಗರವಳ್ಳಿ ಸರ್ವೇ ನಂಬರ್ 159ರಲ್ಲಿ 2011ರಲ್ಲಿ 30*45 ಅಳತೆಯ ನಿವೇಶನವನ್ನು ಗ್ರಾಪಂನಿಂದ ಮಂಜೂರು ಮಾಡಿದ್ದು 2012ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರಾಗಿದೆ. ಮನೆಯ ತಳಪಾಯ ನಿರ್ಮಿಸಿ ಒಂದು ಬಿಲ್ ಸಹ ಪಾವತಿಯಾಗಿದೆ. 2021-22ರಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರಿವೀಟ್‌ಮೆಂಟ್ ಸಹ ಆಗಿದೆ. ಚಿಕ್ಕಮಾಗರವಳ್ಳಿ ಅಸೆಸ್‌ಮೆಂಟ್ ನಂ245ಕ್ಕೆ ಇಲ್ಲಿಯವರೆಗೆ ಕಂದಾಯ ಕಟ್ಟಿದ್ದಾರೆ. ಈ ಎಲ್ಲ ದಾಖಲೆಗಳಿದ್ದರೂ ಗ್ರಾಪಂನಿಂದ ಜಾಗಕ್ಕೆ ಹಕ್ಕುಪತ್ರ ಮಂಜೂರು ಮಾಡಿಲ್ಲ ಎಂದು ಪೊಲೀಸ್ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಪಿಡಿಒ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಚಿಕ್ಕಮಗಳೂರು ತಾಪಂ ಇಒ ತಾರಾನಾಥ್ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಪೊಲೀಸ್ ಇಲಾಖೆ ನಮಗೆ ಸೇರಿದ ಜಾಗ ಎನ್ನುತ್ತಿದ್ದಾರೆ. ಗ್ರಾಪಂನಿಂದ ನಿವೇಶನ ಹಾಗೂ ಮನೆ ನೀಡಿರುವ ದಾಖಲೆಗಳೂ ಇವೆ. ಸರ್ವೇ ನಡೆಸಿದ ನಂತರ ತಿಳಿಯಬೇಕಿದೆ. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸರ್ವೇ ಮಾಡಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಡಿಎಸ್‌ಎಸ್ ಮುಖಂಡ ಕೋಟೆವೂರು ಲಕ್ಷ್ಮಣ್, ಸಗನಮ್ಮ, ಯಲಗುಡಿಗೆ ಹೊನ್ನಪ್ಪ , ಹೆಡದಾಳ್ ಕುಮಾರ್, ಮೈಲಿಮನೆ ಕೃಷ್ಣಮೂರ್ತಿ, ನಾಗೇಶ್, ಹುಣಸೆಹಳ್ಳಿ ಉಮೇಶ್, ಲಕ್ಷ್ಮಣ್, ಮಂಜುನಾಥ್, ಯೋಗೇಶ್ ಇತರರಿದ್ದರು.