

ಗಂಗಾವತಿ: ಅಂಗವಿಕಲರಿಗಾಗಿ ಹಲವು ಯೋಜನೆಗಳಿದ್ದು, ಉದ್ಯೋಗ ಖಾತ್ರಿ ಅಡಿಯಲ್ಲೂ ಕೆಲಸ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಡಿಒ ರಾಮಾನಾಯ್ಕ ಹೇಳಿದರು.
ತಾಲೂಕಿನ ಸಂಗಾಪುರ ಗ್ರಾಪಂ ಕಚೇರಿ ಆವರಣದಲ್ಲಿ ತಾಪಂ, ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ವಿಶೇಷ ಸಮನ್ವಯ ಗ್ರಾಮಸಭೆಯಲ್ಲಿ ಬುಧವಾರ ಮಾತನಾಡಿದರು.
ಅಂಗವಿಕಲರು ಅಭಿವೃದ್ಧಿ ಮುಖ್ಯವಾಹಿನಿಗೆ ಬರಲು ಪಂಚಾಯಿತಿಯಲ್ಲಿ ಶೇ.5 ಅನುದಾನ ಮೀಸಲಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಶ್ರಯ ಯೋಜನೆಯಡಿ ಮನೆಗಳ ಹಂಚಿಕೆಗೂ ಆದ್ಯತೆ ನೀಡಲಾಗಿದೆ. ಸರ್ಕಾರ ವಿತರಿಸುವ ಗುರುತಿನ ಪತ್ರದೊಂದಿಗೆ ಸೌಲಭ್ಯಗಳನ್ನು ಪಡೆಯುವಂತೆ ಸಲಹೆ ನೀಡಿದರು.
ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಸ್‌ಕೆೆರ್ಸ್ ಸಮಿತಿ ಅಧ್ಯಕ್ಷ ಮಂಜುನಾಥ ಹೊಸ್ಕೇರಾ ಮಾತನಾಡಿ, ಅಂಗವಿಕಲರ ಅಭ್ಯೂದಯಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದ್ದು, ಗ್ರಾಪಂನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಂಜಮ್ಮ ಲೋಕನಾಥ, ಉಪಾಧ್ಯಕ್ಷೆ ಹನುಮವ್ವ, ಸದಸ್ಯರಾದ ಗೋಪಿನಾಥ, ಕೌಜಲ್ ಬೇಗಂ, ಶ್ರೀನಿವಾಸ, ವಿಕಲಚೇತನರ ಒಕ್ಕೂಟದ ಪ್ರತಿನಿಧಿಗಳಾದ ಬಸವರಾಜ ಗೋನಾಳ, ಹುಲುಗಪ್ಪ ಕಾಗೇರಿ, ಶರಣಪ್ಪ ಸಂಗಾಪುರ, ಸಿಡಿಪಿಒ ಮೇಲ್ವಿಚಾರಕಿ ಶಿವಲಿಂಗಮ್ಮ, ಸಂಯೋಜಕ ಶರಣಬಸವ ಕೊಟಗಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿದ್ದರು.