ಹೈಬ್ರಿಡ್​ ಮಾದರಿಯಲ್ಲಿ Champions Trophy ನಡೆಸಲು ಮುಂದಾದ PCB?; BCCI ನಿಲುವಿನ ಕುರಿತು ಅಧಿಕಾರಿ ಹೇಳಿದ್ದಿಷ್ಟು

Champions Trophy
Published on

ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ  ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ವಿಚಾರಗಳು ದಿನ ಕಳೆದತೆ ಜಟಿಲವಾಗುತ್ತಿದ್ದು, ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಭದ್ರತೆಯ ಕಾರಣ (Security Reasons) ನೀಡಿ ಭಾರತ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಹೈಬ್ರಿಡ್​ ಮಾದರಿಯಲ್ಲಿ (Hybrid Model) ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದೆ. ಆದರೆ, ಪಾಕಿಸ್ತಾನ ತನ್ನ ನೆಲದಲ್ಲಿ ಭಾರತ ಆಡಬೇಕೆಂದು ಹಠ ಹಿಡಿದಿದ್ದು, ಯಾಕೋ ಭಾರತದ ನಿಲುವಿಗೆ ತಲೆ ಬಾಗಿದಂತೆ ಕಾಣುತ್ತಿದೆ.

ಈಗಾಗಲೇ ಭದ್ರತೆಯ ಕಾರಣ (Security Reasons) ನೀಡಿ ಭಾರತ ಪಾಕ್​ ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿದ್ದು, ತನ್ನ ನಿಲುವು ಅಚಲವಾಗಿರುವುದಾಗಿ ಐಸಿಸಿಗೆ ತಿಳಿಸಿದೆ. ಇತ್ತ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (PCB) ಐಸಿಸಿ  (ICC) ನಿಲುವಿಗೆ ಬದ್ದರಾಗಿರುವುದಾಗಿ ಹೇಳಿಕೊಂಡಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಐಸಿಸಿ ಹೈರಾಣಾಗಿದೆ. ಟೂರ್ನಿಗೆ ಸಂಬಂಧಿಸಿದಂತೆ ಸಭೆ ಕರೆದಿದೆ. ಇದೀಗ ಪಿಸಿಬಿ ಭಾರತದ ಬೇಡಿಕೆಗೆ ಗ್ರೀನ್​ ಸಿಗ್ನಲ್ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಈ ಬಗ್ಗೆ ಪಿಸಿಬಿಯ (PCb) ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ಧಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಈ ಬಗ್ಗೆ ಮಾತನಾಡಿರುವ ಪಿಸಿಬಿಯ ಹಿರಿಯ ಅಧಿಕಾರಿ, ಮಂಡಳಿಯ ಅಧಿಕಾರಿಗಳು ಈ ಸಂಬಂಧ ಸಭೆ ನಡೆಸಿದ್ದು, ಪಿಸಿಬಿ ಭಾರತದ ನಿಲುವಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಭಾರತವು ಪಾಕಿಸ್ತಾನದಲ್ಲಿ ಆಡಲು ಸಿದ್ಧರಿಲ್ಲದಿದ್ದರೆ ಅದು ಅವರ ಸಮಸ್ಯೆಯಾಗಿದೆ. ಭಾರತ ಬಿಟ್ಟು ಉಳಿದ ಆರು ದೇಶಗಳಿಗೆ ಯಾವುದೇ ಸಮಸ್ಯೆ ಇಲ್ಲದಿರುವುದು ನಮಗೆ ಸಕಾರಾತ್ಮಕವಾಗಿದೆ. ಒಂದು ವೇಳೆ ನಾವು ಹೈಬ್ರಿಡ್​ ಮಾದರಿಯಲ್ಲಿ ನಡೆಸಿದರೆ ಪಾಕಿಸ್ತಾನ ವಿರುದ್ಧದ ಪಂದ್ಯ ಹಾಗೂ ಫೈನಲ್​ ಮ್ಯಾಚ್​ಅನ್ನು ನಮ್ಮ ನೆಲದಲ್ಲಿ ಆಡಬೇಕಾಗುತ್ತದೆ. ಟೂರ್ನಿಗೆ (Champions Trophy) ಸಂಬಂಧಿಸಿದಂತೆ ಈಗಾಗಲೇ ನಾವು ಲಾಹೋರ್​ನ ಗಡಾಫಿ ಕ್ರೀಡಾಂಗಣವನ್ನು ಸಿದ್ದಪಡಿಸುತ್ತಿದ್ದು, ಭಾರತ ಈ ಒಂದು ಬೇಡಿಕೆಯನ್ನು ಪರಗಣಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Champions Trophy

ಆರ್ಥಿಕ ಸಂಕಷ್ಟದ ಭಯ

ಭಾರತ ತಂಡ (Team India) ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗಲಿದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ (Team India) ಇರುವ ಕ್ರೇಜ್​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್​ ಮಂಡಳಿ ಹಾಗೂ ಸರ್ಕಾರ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್​ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ (PCB) ನಿರೀಕ್ಷೆಗೆ ಬಿಸಿಸಿಐ (BCCI) ಆಘಾತ ನೀಡಿದ್ದು, ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಕಡ್ಡಿ ಮರಿದಂತೆ ಹೇಳಿದೆ.

ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್​ ಹೋಟೆಲ್​ ನಿರ್ಮಿಸುತ್ತಿರುವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಪಾಕಿಸ್ತಾನ ಆಸೆಗೆ ಭಾರತ ತಣ್ಣೀರು ಎರಚಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net