ಕಡೆಗೂ BCCI ಬಳಿ ಕ್ಷಮೆಯಾಚಿಸಿದ ಪಿಸಿಬಿ: ಟ್ರೋಫಿ ಕೊಡದಿರಲು ಕಾರಣ ತಿಳಿಸಿದ ಮೊಹ್ಸಿನ್ ನಖ್ವಿ

Untitled design - 2025-10-01T132729.971
Published on

BCCI: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯವನ್ನು ಭಾರತ ಗೆದ್ದ ಬಳಿಕ ಕ್ರೀಡಾಂಗಣದಿಂದ ಏಷ್ಯಾ ಕಪ್ 2025 ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಬಿಸಿಸಿಐಗೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ನಖ್ವಿ, ಕ್ರೀಡಾಂಗಣದಲ್ಲಿನ ತಮ್ಮ ನಡೆಗೆ ಕ್ಷಮೆಯಾಚಿಸಿದ್ದಾರೆ. ಆದರೆ, ವಿಜೇತರಿಗೆ ಪದಕಗಳು ಮತ್ತು ಟ್ರೋಫಿಯನ್ನು ನೀಡದಿರುವ ಬಗ್ಗೆ ಅಚಲವಾಗಿ ಉಳಿದಿದ್ದಾರೆ ಎಂದು ಇಂಡಿಯಾಟುಡೇ ಬುಧವಾರ (ಅಕ್ಟೋಬರ್ 1) ವರದಿ ಉಲ್ಲೇಖಿಸಿದೆ.

ಮೊಹ್ಸಿನ್ ನಖ್ವಿ ಹೇಳಿದ್ದೇನು?

"ಇದು ಆಗಬಾರದಿತ್ತು. ಆದರೆ, ಈಗ ನಾವು ಹೊಸ ಉಪಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಸೂರ್ಯಕುಮಾರ್ ಯಾದವ್ ಅವರೇ ಬಂದು ಟ್ರೋಫಿಯನ್ನು ತೆಗೆದುಕೊಳ್ಳಬೇಕು" ಎಂದು ನಖ್ವಿ ಎಸಿಸಿ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಭೆ ''ನೀವು ಅವರ ಮುಂದೆ ಇದ್ದಾಗ ಅವರು ಟ್ರೋಫಿಯನ್ನು ತೆಗೆದುಕೊಳ್ಳಲಿಲ್ಲ, ಈಗ ಅವರು ಬರುತ್ತಾರೆ ಎಂದು ನೀವು ಭಾವಿಸುತ್ತೀರಾ?" ಎಂದು ಸಭೆಯಲ್ಲಿನ ಸದಸ್ಯರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ, ಭಾರತ ನಖ್ವಿಯಿಂದ ಟ್ರೋಫಿ ಮತ್ತು ಪದಕಗಳನ್ನು ಪಡೆಯಲು ನಿರಾಕರಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಎಸಿಸಿ ಮುಖ್ಯಸ್ಥ ನಖ್ವಿ ಭಾರತದ ಆಟಗಾರರಿಗೆ ಅವರ ಸ್ಮರಣಿಕೆಗಳನ್ನು ನೀಡಲು ನಿರಾಕರಿಸಿದರು ಮತ್ತು ಎಸಿಸಿ ಅಧಿಕಾರಿಗಳಿಗೆ ಟ್ರೋಫಿಯನ್ನು ಮೈದಾನದಿಂದ ತೆಗೆದುಕೊಂಡು ಹೋಗುವಂತೆ ಆದೇಶಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net