

ಸಿದ್ದಾಪುರ: ತಾಲೂಕಿನ ಕೆಲವೆಡೆ ಡೆಂೆ ಆವರಿಸುತ್ತಿದ್ದು, ಆರೋಗ್ಯ ಇಲಾಖೆ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಜಾಗೃತರಾಗಬೇಕಾಗಿದೆ. ಮುಖ್ಯವಾಗಿ ಶಾಲೆ, ದೇವಸ್ಥಾನ, ಸರ್ಕಾರಿ ಕಚೇರಿ ಸೇರಿ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕುರಿತು ಹೆಚ್ಚು ಗಮನ ನೀಡಬೇಕೆಂದು ತಾಪಂ ಆಡಳಿತಾಧಿಕಾರಿ ಬಸವರಾಜ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಗ್ರಾಪಂ ಪಿಡಿಒಗಳು ತಮ್ಮ ವ್ಯಾಪ್ತಿಯ ಚರಂಡಿಗಳಲ್ಲಿ ಕೆಸರು ನಿಲ್ಲದಂತೆ ಹಾಗೂ ಸ್ವಚ್ಛತೆ ಕುರಿತು ಗಮನ ನೀಡುವಂತೆ ತಾಪಂ ಇಒ ಅವರು ಸೂಚನೆ ನೀಡಬೇಕು ಎಂದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ನಾಲ್ವರಿಗೆ ಡೆಂೆ ಇರುವುದು ದೃಢಪಟ್ಟಿದೆ. ಈ ಕುರಿತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಾಗೃತಿ ವಹಿಸುವಂತೆ ಸೂಚನೆ ನೀಡಲಾಗಿದೆ. ಮಳೆ ಪ್ರಾರಂಭವಾಗಿದ್ದರಿಂದ ಕೆಎಫ್ಡಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.
ಬಿಇಒ ಎಂ.ಎಚ್. ನಾಯ್ಕ ಮಾತನಾಡಿ, ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು ಈಗಾಗಲೇ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಶೇ. 76ರಷ್ಟು ಪಠ್ಯ- ಪುಸ್ತಕಗಳನ್ನು ವಿತರಿಸಲಾಗಿದೆ. 4ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಪುಸ್ತಕಗಳು ಬಂದಿಲ್ಲ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಅರುಣ ಜಿ.ಎಚ್. ಮಾತನಾಡಿ, ತಾಲೂಕಿನ ಹಲವೆಡೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಅಡಕೆ ಬೆಳೆಗಾರರು ಮುಂಜಾಗ್ರತೆ ವಹಿಸಿ ರೋಗ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.
ಕೃಷಿ, ಬಿಸಿಎಂ, ಸಮಾಜಕಲ್ಯಾಣ, ಸಿಡಿಪಿಒ, ಪಪಂ, ಜಿಪಂ, ಕಂದಾಯ ಮತ್ತಿತರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ದೇವರಾಜ್ ಉಪಸ್ಥಿತರಿದ್ದರು.