ಕುತಂತ್ರಗಳನ್ನು ಮೇಲೊಬ್ಬ ನೋಡುತ್ತಿರುವನು; ಹೀಗೆ ಪವಿತ್ರಾಗೌಡ ಕೌಂಟರ್​ ಕೊಟ್ಟಿದ್ದು ಯಾರಿಗೆ? | Pavithra Gowda

Untitled design (42)
Published on

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಅವರ ಆಪ್ತೆ ಪವಿತ್ರಾ ಗೌಡ(Pavithra Gowda) ಸೇರಿದಂತೆ ಒಟ್ಟು 17 ಆರೋಪಿಗಳು ರಾಜ್ಯದ ವಿವಿಧ ಜೈಲುಗಳಲ್ಲಿದ್ದರು. ಇತ್ತೀಚೆಗಷ್ಟೆ ಜಾಮೀನಿನ ಮೇಲೆ ನಟ ದರ್ಶನ್​ ಮತ್ತು ಪವಿತ್ರಾಗೌಡ ಇಬ್ಬರೂ ಜೈಲಿನಿಂದ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಟೆಂಪಲ್​ ರನ್​ ಮಾಡುತ್ತಿದ್ದ ಪವಿತ್ರಾ ಗೌಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ಆ ಪೋಸ್ಟ್​ ನೋಡಿದ್ರೆ ಪವಿತ್ರಾ ಯಾರಿಗೋ ಕೌಂಟರ್​ ನೀಡುತ್ತಿದ್ದಾರೆ ಎನ್ನುವಂತಿದೆ. ಪೋಸ್ಟ್​ನಲ್ಲಿ ಭಗವಾನ್ ಕೃಷ್ಣನು ಅರ್ಜುನನಿಗೆ ಉಪದೇಶ ಮಾಡುತ್ತಿರುವ ಫೋಟೋ ಇದೆ. ಆದರೆ ಅದರ ಕೆಳಗಿರುವ ಸಾಲುಗಳನ್ನು ನೋಡಿದರೆ ಯಾರನ್ನು ಉಲ್ಲೇಖಿಸಿ ಪವಿತ್ರಾಗೌಡ ಈ ಸಂದೇಶವನ್ನು ರವಾನಿಸಿದ್ದಾರೆ ಎಂಬ ಪ್ರಶ್ನೆ ಮೂಡವುದಂತೂ ನಿಜ.

ಆ ಸಾಲುಗಳು ಹೀಗಿವೆ, ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು. ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು ಎನ್ನುವ ಭಗವದ್ಗೀತೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ. ಪವಿತ್ರಾ ಅವರು ಯಾವ ಕಾಣದ ಕೈಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನೋಡುಗರು ತಲೆಕೆಡಿಸಿಕೊಂಡಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಫುಲ್‌ ಟೆಂಪಲ್‌ ರನ್‌ ಮಾಡಿ ಸೈಲೆಂಟ್‌ ಆಗಿದ್ದ ಪವಿತ್ರಾ ಗೌಡ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ.

ಸಾಲುಗಳಲ್ಲಿ ಇರುವಂತೆ ಅವರ ಪ್ರಕಾರ ಕಾಣದ ಕೈಗಳು ಯಾರಿರಬಹುದು? ಅವರ ಮೇಲೆ ಏನು ಕುತಂತ್ರಗಳು ನಡೆದಿವೆ? ಅವರಿಗೆ ಕಣ್ಣೀರು ತರಿಸಿದ ವಿಚಾರವೇನು? ಎನ್ನುವ ಹಲವು ಪ್ರಶ್ನೆಗಳು ಮುಂದೆ ಬಂದಿವೆ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ಜಾಮೀನು ಅರ್ಜಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಈ ಸಮಯದಲ್ಲಿ ಪವಿತ್ರಾ ಗೌಡ ಮಾಡಿರುವ ಪೋಸ್ಟ್​​ ಪರಿಸ್ಥಿತಿಯನ್ನು ಹೋಲುತ್ತಿದೆ ಎಂದು ಹೇಳುತ್ತಿದ್ದಾರೆ.

ಪ್ರಕರಣದ ವಿವರ

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು 2024 ಜೂನ್ 8ರ ರಾತ್ರಿ ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಜೂನ್‌.9ರಂದು ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ದರ್ಶನ್‌, ಪವಿತ್ರಾಗೌಡ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಕೆಳಹಂತದ ನ್ಯಾಯಾಲಯವು 10 ಮಂದಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಉಳಿದ 7 ಆರೋಪಿಗಳಿಗೆ ಡಿ.13ರಂದು ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net