

ಮೈಸೂರು: ‘ಇವ ನಮ್ಮವ ಇವ ನಮ್ಮವ..’ ಎಂದು ಹೇಳುವಾಗ ಮಹಿಳೆಯರು ಎಲ್ಲಿ? ಇದರಲ್ಲಿ ಮಹಿಳೆಯರು ಇದ್ದಾರೆಯೇ? ಇದು ಸಹ ವಚನ ಸಾಹಿತ್ಯದಲ್ಲಿರುವ ಪಿತೃಪ್ರಧಾನದ ರಾಜಕೀಯವನ್ನೇ ಸಂಕೇತಿಸುತ್ತದೆ ಎಂದು ಧಾರವಾಡದ ಬರಹಗಾರ್ತಿ ಡಾ.ವಿನಯಾ ಒಕ್ಕುಂದ ಖಾರವಾಗಿ ಹೇಳಿದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಂಗಾಯಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ‘ವಚನ ಚಳವಳಿ ಮತ್ತು ಸ್ತ್ರೀ ಸಮಾನತೆ’ ಕುರಿತು ಮಾತನಾಡಿದರು.
ಸಮಾನತೆ ಆಶಯ ಹೊಂದಿರುವ ವಚನ ಚಳವಳಿಯೇ ಮಹಿಳೆಯರನ್ನು ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
12ನೇ ಶತಮಾನದ ವಚನ ಚಳವಳಿಯಲ್ಲಿ ಹೆಣ್ಣಿನ ಒಳಗೊಳ್ಳುವಿಕೆ ಇಲ್ಲ. ದೇವದಾಸಿಯರು, ಸೂಳೆಗಾರ್ತಿಯರು ಈ ಚಳವಳಿಯ ದೊಡ್ಡ ಭಾಗವಾಗಿದ್ದರು. ಆದರೆ, ಇದನ್ನೂ ಈಗಲೂ ಒಪ್ಪಿಕೊಳ್ಳುತ್ತಿಲ್ಲ. ಇವರ ಇರುವಿಕೆ ಶಕ್ತಿ ಅನೇಕರಿಗೆ ದಾರಿದೀಪವಾಗುತ್ತಿತ್ತು. ಹಾಗೆ ಆಗಲು ಬಿಡಲಿಲ್ಲ. ಬದಲಿಗೆ ಇವರನ್ನೇ ಅವಮಾನಿಸುವ, ಅಪಮಾನಿಸುವ, ದುರ್ಬಳಕೆ ಮಾಡಿಕೊಳ್ಳಲಾಯಿತು ಎಂದರು.
ಹೆಣ್ಣಿಗೆ ಏನು ಬೇಕು? ಈ ಪ್ರಶ್ನೆಯೊಂದಿಗೆ ಮುಗಿದು ಹೋಗುತ್ತದೆಯೇ? ಇಲ್ಲ. ಸಮಸಮಾಜ ನಿರ್ಮಾಣವಾಗದೆ ಲಿಂಗ ತಾರತಮ್ಯ ನಿರ್ಮೂಲನೆಯಾಗಲ್ಲ ಎಂದರು.
ಜಾತಿ, ಧರ್ಮ, ವರ್ಗ, ಲಿಂಗ ತಾರತಮ್ಯ ಎಂಬ ನಾಲ್ಕು ವೈರಸ್ಗಳೂ ಈಗಲೂ ತಾಂಡವವಾಡುತ್ತಿವೆ. ಕರೊನಾ ವೈರಸ್ ರೂಪಾಂತರಗೊಳ್ಳುತ್ತಿದ್ದಂತೆ ದುರ್ಬಲವಾಗುತ್ತದೆ. ಆದರೆ, ಈ ವೈರಸ್ ರೂಪಾಂತರಗೊಂಡಷ್ಟು ಗಟ್ಟಿಯಾಗುತ್ತಿದೆ. ಇದಕ್ಕೆ ಮಹಿಳೆಯರೇ ಮೊದಲ ಬಲಿಪಶುಗಳು ಎಂದು ಹೇಳಿದರು.
ಅಪವ್ಯಾಖ್ಯಾನದಲ್ಲಿ ಈಗಿನ ಕಾಲಘಟ್ಟದಲ್ಲಿ ಸಮಾನತೆಯೂ ಅಪವ್ಯಾಖ್ಯಾನಕ್ಕೆ ಒಳಗಾಗಿದೆ. ಮಹಿಳಾ ಸಂವೇದನಾಶೀಲತೆಗೆ ಅರ್ಥವೇ ಇಲ್ಲವೇನೋ ಎಂಬ ಕಾಲದಲ್ಲಿ ಜೀವಿಸುತ್ತಿದ್ದೇವೆ. ಆದರೆ, ಸಮಸಮಾಜವಿಲ್ಲದೆ ಸಮಾನತೆಗೆ ಅರ್ಥವೇ ಇಲ್ಲ ಎಂದರು.
ಅಕ್ಕಮಹಾದೇವಿ ಮಹಿಳೆಯರಿಗೆ ಮಾದರಿ. ಪಿತೃ ಸಮಾಜ, ರಾಜ್ಯಪ್ರಭುತ್ವವನ್ನು ಧಿಕ್ಕರಿಸಿ ಬದುಕಿದವಳು ಎಂದು ಹೇಳಿದರು.
ರಂಗನಿರ್ದೇಶಕಿ ಕೆ.ಆರ್.ಸುಮತಿ ಮಾತನಾಡಿ, ಸ್ತ್ರೀ ಸಂವೇದನಾಶೀಲತೆ ಪುರುಷರಿಗಷ್ಟೇ ಅಲ್ಲ, ಬಹಳಷ್ಟು ಮಹಿಳೆಯರಿಗೂ ಇಲ್ಲ. ಇದು ಅವಳ ಜಾಣ ಮರೆವು ಇರಬಹುದು. ಅರಿವಿನ ಕೊರತೆಯೂ ಇರಬಹುದು ಎಂದು ಬೇಸರ ವ್ಯಕ್ತಪಡಿಸಿದರು.
ಅನುಭವ ಮಂಟಪದಲ್ಲಿ ಕೆಲ ಮಹಿಳೆಯರಿಗೆ ಮಾತ್ರ ಅವಕಾಶವಿತ್ತು. ಬಹಳಷ್ಟು ಹೆಣ್ಣು ಮಕ್ಕಳಿಗೆ ಪ್ರವೇಶ ಇರಲಿಲ್ಲ. ಆಗಲೂ ಸ್ತ್ರೀಯರನ್ನು ಸಮಾನವಾಗಿ ಪರಿಗಣಿಸಿರಲಿಲ್ಲ ಎಂದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ 15-20 ನಾಟಕಗಳಿವೆ. ಈ ಪೈಕಿ 2 ಮಹಿಳಾ ನಿರ್ದೇಶಕರ ನಾಟಕಗಳು ಮಾತ್ರ ಇವೆ. ಆಯ್ಕೆ ಸಮಿತಿಯಲ್ಲಿ ಯಾರಿಗೂ ಸಂವೇದನಶೀಲತೆ ಇರಲಿಲ್ಲವೋ ಅಥವಾ ಎಚ್ಚರಿಕೆಯೂ ಇರಲಿಲ್ಲವೋ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆ ಎಂದಾಕ್ಷಣವೇ ಅವರ ದೇಹದ ಮೇಲೆ ಕೇಂದ್ರೀಕರಣವಾಗುತ್ತದೆ. ಮಾಲೀಕತ್ವ ಮತ್ತು ವಸ್ತು ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ, ಹೆಣ್ಣಿನ ಮೇಲೆ ಅತಿಕ್ರಮಣಗಳು ನಡೆಯುತ್ತಿವೆ ಎಂದು ಹೇಳಿದರು.
ವಚನ ಶಕ್ತಿ ಯಾರಿಗೆ ತಲುಪಿಸಬೇಕು. ಕಟ್ಟಕಡೆಯ ಮಹಿಳೆಯರಿಗೆ ಅದರ ಶಕ್ತಿಯನ್ನು ಮುಟ್ಟಿಸಬೇಕು. ದಮನಿತ, ನೊಂದ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವಚನ ಚಳವಳಿಯ ಆಸರೆ ದೊರೆಯಬೇಕು. ಆದರೆ, ಇಷ್ಟು ವರ್ಷ ಕಳೆದರೂ ಅದು ಇನ್ನೂ ಸಾಧ್ಯವೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ತಾಲೂಕಿನಲ್ಲೇ ಬಾಲ್ಯವಿವಾಹಗಳು ಹೆಚ್ಚಾಗುತ್ತಿವೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಸಣ್ಣವಯಸ್ಸಿನ ವಿಧವೆಯರ ಸಂಖ್ಯೆ ಅಧಿಕವಾಗಿದೆ. ಈಗಲೂ ಇದನ್ನು ತಡೆಯಲು ಆಗುತ್ತಿಲ್ಲ. ಏಕೆ? ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ ಸಮಾನತೆ ಕುರಿತು ತಿಳಿದಿಲ್ಲ. ತಾನು ಅನುಭವಿಸುತ್ತಿರುವ ಹೆಣ್ಣಿನ ಬವಣೆಯ ಕುರಿತು ಅರಿವೂ ಇಲ್ಲವಾಗಿದೆ. ಹೆಣ್ಣಿನ ಬಾಹ್ಯ ಸೌಂದರ್ಯ, ಕೋಮಲತೆಯ ಮಾತುಗಳು ಆಕೆಯನ್ನು ಭ್ರಮಾಲೋಕಕ್ಕೆ ಕರೆದೊಯ್ಯುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕಮಹಾದೇವಿ ಸಂಶೋಧನಾ ಪೀಠದ ನಿರ್ದೇಶಕಿ ಪ್ರೊ.ಕವಿತಾ ರೈ ಮಾತನಾಡಿ, ಜವಾಬ್ದಾರಿಯುತ ಪಾಲುಗೊಳ್ಳುವಿಕೆ ಇಲ್ಲದೆ ಮಹಿಳಾ ಸಮಾನತೆಗೆ ಅರ್ಥವೇ ಇಲ್ಲ ಎಂದು ವಿಶ್ಲೇಷಿಸಿದರು.
ಏಕೆ ಅಕ್ಕಮಹಾದೇವಿ ಒಬ್ಬರನ್ನೇ ಪರೀಕ್ಷೆಗೆ ಒಳಪಡಿಸಲಾಯಿತು. ಯಾರಿಗೂ ಇಲ್ಲದ ಪರೀಕ್ಷೆ ಇವಳಿಗೆ ಏಕೆ? ಅನುಭವ ಮಂಟಪದಲ್ಲೇ ಅಲ್ಲಮಪ್ರಭು ಅವರು ಅಕ್ಕಮಹಾದೇವಿಯ ಸತಿತನವನ್ನು ಪ್ರಶ್ನೆ ಮಾಡುತ್ತಾರೆ. ಯಾವ ಕಾರಣಕ್ಕೆ ಇದು? ಅಕ್ಕಮಹಾದೇವಿ ಹೆಣ್ಣು ಎಂಬ ಕಾರಣಕ್ಕೆ ಈ ಪರೀಕ್ಷೆಯೇ? ಎಂದು ಪ್ರಶ್ನಿಸಿದರು. ಹಿರಿಯ ಲೇಖಕಿ ಡಾ.ಎಚ್.ಎಸ್.ಶ್ರೀಮತಿ ಇದ್ದರು.
ಮತ್ತೊಂದು ಗೋಷ್ಠಿಯಲ್ಲಿ ‘ವಚನ ಚಳವಳಿ ಮತ್ತು ಕನ್ನಡ ರಂಗಭೂಮಿ’ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ವಿಷಯ ಮಂಡಿಸಿದರು. ನಾಟಕಕಾರ ನಟರಾಜ್ ಹೊನ್ನವಳ್ಳಿ, ಧಾರವಾಡದ ರಂಗನಿರ್ದೇಶಕ ಮಹದೇವ ಹಡಪದ, ರಂಗಕರ್ಮಿ ಸಿ.ಬಸವಲಿಂಗಯ್ಯ ಇದ್ದರು.