

ಪಾಟ್ನಾ: ಬೈಕ್ನಲ್ಲಿ ಓಡಾಡುವವರು ಯಾವೆಲ್ಲಾ ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ವಿಧಿಸಬಹುದು. ಹೆಲ್ಮೆಟ್ ಹಾಕದಿದ್ರೆ, ಒನ್ವೇಯಲ್ಲಿ ಚಲಾಯಿಸಿದ್ರೆ, ತ್ರಿಬಲ್ ರೈಡಿಂಗ್ ಮಾಡಿದ್ರೆ, ಸಿಗ್ನಲ್ ಬ್ರೇಕ್ ಮಾಡಿದ್ರೆ ಹೀಗೆ ಹಲವು ಕಾರಣಗಳಿಗೆ ಫೈನ್ ಹಾಕುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಅದರಲ್ಲಿ ಕಾರು ಮಾಲೀಕನಿಗೆ ನೀವು ಹೆಲ್ಮೆಟ್ ಧರಿಸಿಲ್ಲ ಎಂದು ಹೇಳಿ ದಂಡ ವಿಧಿಸಿ ಚಲನ್ ಕಳುಹಿಸಿದ್ದಾರೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಸಂಚಾರಿ ಪೊಲೀಸರು ಮತ್ಯಾವುದಕ್ಕೆಲ್ಲಾ ದಂಡ ವಿಧಿಸುತ್ತಾರೋ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ನಾನು ಒಂದು ವಾರದಿಂದ ಕಾರನ್ನು ಹೊರಗೆ ತೆಗೆದಿಲ್ಲ. ನನಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿ ಚಲನ್ ಕಳುಹಿಸಿದ್ದಾರೆ. ಫೋನ್ನಲ್ಲಿ ಮೆಸೇಜ್ ಬಂದಾಗಿನಿಂದ ಆನ್ಲೈನ್ನಲ್ಲಿ ಚಲನ್ ಅನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ. ಸಮಸ್ಯೆ ಪರಿಹರಿಸಲು ಮಾಡುತ್ತಿರುವ ಪ್ರಯತ್ನಕ್ಕೆಲ್ಲಾ ಆನ್ಲೈನ್ನಲ್ಲಿ ಒಂದಲ್ಲ ಒಂದು ತೊಡುಕು ಎದುರಾಗುತ್ತಿದೆ ಎಂದು ಸಂತ್ರಸ್ತರು ಹೇಳಿದರು.
ಅಸಲಿಗೆ, ಬಿಹಾರದ ಬೇಗಂಪುರನ ಪೋಖಾರಾ ನಿವಾಸಿಯಾಗಿರುವ ಗೌರವ್ ಕುಮಾರ್ ಎಂಬುವವರಿಗೆ ಶನಿವಾರ (ಆಗಸ್ಟ್ 31) ಸಂಜೆ 5:30ಕ್ಕೆ ಪಾಟ್ನಾ ಟ್ರಾಫಿಕ್ ಪೊಲೀಸರಿಂದ ಮೆಸೇಜ್ ಬಂದಿದೆ. ಅದರಲ್ಲಿ ಹೆಲ್ಮೆಟ್ ಹಾಕದೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ. ಕಳೆದ ಏಳು ದಿನಗಳಿಂದ ಕಾರನ್ನು ಬಳಸಲೆ ಇಲ್ಲ. ಜತೆಗೆ ಕಾರು ಚಲಾಯಿಸಿದರ ಹೆಲ್ಮೆಟ್ ಬಳಸಿಲ್ಲ ಎಂದು ಫೈನ್ ಹಾಕಿದ್ದಾರೆ ಎಂದು ಅವರಿಗೆ ಆಶ್ಚರ್ಯವಾಗಿದೆ. ಸುತ್ತಮುತ್ತಲಿನವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡಿದ್ದಾರೆ.
ಬಳಿಕ ಹೆಚ್ಚಿನ ಮಾಹಿತಿಯನ್ನು ಕಂಡುಕೊಂಡ ಬಳಿಕ ಗೌರವ್ ಕುಮಾರ್ ಅವರಿಗೆ ಅಸಲಿ ಸಂಗತಿ ತಿಳಿದಿದೆ.ಚಲನ್ನಲ್ಲಿ ಯುವ ಜೋಡಿಯು ಮೋಟರ್‌ಸೈಕಲ್‌ನಲ್ಲಿ ಹೋಗುತ್ತಿರುವ ಫೋಟೋ ಇದೆ. BR 01 EV2598 ಎಂಬ ಬೈಕ್ನ ನಂಬರ್ ಪ್ಲೇಟ್ ಹಾಗೂ ಕುಮಾರ್ ಅವರ ಕಾರಿನ ನಂಬರ್ ಪ್ಲೇಟ್ BR 01 FV 2598 ನಡುವೆ ಒಂದೇ ಒಂದು ಅಕ್ಷರದ ವ್ಯತ್ಯಾಸವಿದೆ. ಬೈಕ್ನವರಿಗೆ ಕಳುಹಿಸಬೇಕಾದ ಚಲನ್ ಅನ್ನು ಟ್ರಾಫಿಕ್ ಸಿಬ್ಬಂದಿ ತನಗೆ ಕಳುಹಿಸಿದ್ದಾರೆ ಎಂದು ಅರಿವಾಗಿದೆ. ಈ ತಪ್ಪನ್ನು ಸರಿಪಡಿಸಲು ಆನ್ಲೈನ್ನಲ್ಲಿ ದೂರ ನೀಡಿದರೂ ಅಧಿಕಾರಿಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಗೌರವ್ ಹೇಳಿದರು. (ಎಜೆನ್ಸೀಸ್)