

ವುಹಾನ್: ಚೀನಾ ಕೊರೊನಾ ವೈರಸ್ ದಾಳಿಯಿಂದ ಸ್ವಲ್ಪಸ್ವಲ್ಪವೇ ಚೇತರಸಿಕೊಳ್ಳುತ್ತಿದೆ. ಭಾರತಕ್ಕೆ ಕೊರೊನಾ ಬಂದಿದ್ದು ಈಗಾಗಲೇ 53 ಜನರಲ್ಲಿ ಕೊರೊನಾ ಇರುವುದು ಧೃಡವಾಗಿದೆ. ಇದೇ ಸಮಯದಲ್ಲಿ ಕೊರೊನಾದಿಂದಾಗಿ ಸತ್ತವರ ಬಗ್ಗೆ ವುಹಾನ್ ವೈದ್ಯರು ಮಾಹಿತಿಯೊಂದನ್ನು ಬಿಟ್ಟುಕೊಟ್ಟಿದ್ದಾರೆ.
ರಕ್ತದೊತ್ತಡ ಹೆಚ್ಚಿರುವವರಿಗೆ ಕೊರೊನಾ ಬಂದರೆ ಬದುಕುವುದು ಕಷ್ಟ ಸಾಧ್ಯ ಎಂದು ವುಹಾನ್ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅವರು ಚಿಕಿತ್ಸೆ ನೀಡಿರುವ ಆಸ್ಪತ್ರೆಯಲ್ಲಿ ಒಟ್ಟು 170 ರೋಗಿಗಳು ಕೊರೊನಾದಿಂದಾಗಿ ಮೃತರಾಗಿದ್ದು ಅದರಲ್ಲಿ ಅರ್ಧದಷ್ಟು ಜನರಿಗೆ ಹೈ ಬಿಪಿ ಇತ್ತು ಎಂದು ಅವರು ತಿಳಿಸಿದ್ದಾರೆ. ಆದರೆ ಈ ಕುರಿತಾಗಿ ಯಾವುದೇ ವೈದ್ಯಕೀಯ ಸಂಶೋಧನೆ ನಡೆದಿಲ್ಲ.
ಮೃತರಾಗಿರುವ ರೋಗಿಗಳ ಪೈಕಿ ಹೆಚ್ಚಿನ ರೋಗಿಗಳಲ್ಲಿ ಹೈ ಬಿಪಿ ಇತ್ತು ಎಂದು ಪೀಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕದ ನಿರ್ದೇಶಕರಾಗಿರುವ ಡು ಬಿನ್ ತಿಳಿಸಿದ್ದಾರೆ. ಇವರು ವುಹಾನ್ ನಗರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲ್ಪಟ್ಟ ಉನ್ನತ ವೈದ್ಯರ ತಂಡದಲ್ಲಿ ಒಬ್ಬರಾಗಿದ್ದಾರೆ. ಇತರ ವೈದ್ಯರು ಮತ್ತು ತಾವು ಗಮನಿಸಿರುವ ಪ್ರಕರಣಗಳ ಆಧಾರದ ಮೇಲೆ ಈ ವಿಚಾರವನ್ನು ತಿಳಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ರಕ್ತದೊತ್ತಡ ಹೆಚ್ಚಿರುವವರು ಆದಷ್ಟು ಸುರಕ್ಷೆತಯಿಂದಿರಿ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)