ಶ್ವಾಸಕೋಶದ ಎಲ್ಲಾ ಭಾಗಗಳಿಗೆ ವ್ಯಾಯಾಮ ನೀಡುವ 'ಪರ್ಯಂಕಾಸನ'

1163523
Published on

ಬೆನ್ನೆಲುಬು ಮತ್ತು ಶ್ವಾಸಕೋಶದ ಎಲ್ಲಾ ಭಾಗಗಳಿಗೆ ಹೆಚ್ಚಿನ ವ್ಯಾಯಾಮ ದೊರಕುವ ಯೋಗಾಸನವೆಂದರೆ, ಪರ್ಯಂಕಾಸನ. ಸಂಸ್ಕೃತದಲ್ಲಿ ಪರ್ಯಂಕ ಅಂದರೆ ಮಂಚ ಎಂದರ್ಥ. ದೇಹವು ಮಂಚದ ಆಕಾರದಲ್ಲಿ ಕಾಣುವ ಭಂಗಿ ಈ ಆಸನದಲ್ಲಿದೆ.

ಪ್ರಯೋಜನಗಳು: ಪರ್ಯಂಕಾಸನ ಮಾಡುವುದರಿಂದ ಶ್ವಾಸಕೋಶಗಳ ವಿಕಾರ ಇತ್ಯಾದಿ ಸಮಸ್ಯೆಗಳ ನಿಯಂತ್ರಣವಾಗುತ್ತದೆ. ಅಸ್ತಮಾ ನಿಯಂತ್ರಣ, ಬೆನ್ನು ನೋವು ಮತ್ತು ಸೊಂಟ ನೋವು ನಿಯಂತ್ರಣದಲ್ಲಿ ಇದು ಉಪಕಾರಿ. ಮತ್ಸ್ಯಾಸನ ಮಾಡಲು ಆಗದವರಿಗೆ ಈ ಆಸನ ಬಹಳ ಸಹಕಾರಿ.

ಅಭ್ಯಾಸ ಕ್ರಮ: ಜಮಖಾನದ ಮೇಲೆ ವೀರಾಸನದ ಭಂಗಿಗೆ ಬರಬೇಕು. ಉಸಿರನ್ನು ಬಿಡುತ್ತಾ, ಕೈಗಳ ಸಹಾಯದಿಂದ ನಿಧಾನವಾಗಿ, ಬೆನ್ನಿನ ಮೇಲೆ ಮಲಗಬೇಕು. ಕೈಗಳನ್ನು ತಲೆಯ ಹಿಂದಕ್ಕೆ ಚಾಚಿ, ಎರಡೂ ಕೈಗಳ ಸಹಾಯದಿಂದ ಎದೆಯ ಭಾಗವನ್ನು ಮೇಲಕ್ಕೆತ್ತುವುದು. ತಲೆಯ ನಡುನೆತ್ತಿಯನ್ನು ನೆಲಕ್ಕೆ ಊರಿ, ನಂತರ ತೋಳುಗಳನ್ನು ತಲೆಯ ಪಕ್ಕಕ್ಕೆ ಪರಸ್ಪರ ಹೆಣೆಯುವುದು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುವುದು. ಆಮೇಲೆ ಉಸಿರನ್ನು ಬಿಡುತ್ತಾ, ಕೈಗಳ ಸಹಾಯದಿಂದ ಶಿರಸ್ಸನ್ನು ನಿಧಾನವಾಗಿ ಸರಿಪಡಿಸಿಕೊಳ್ಳಬೇಕು. ಆಮೇಲೆ ನಿಧಾನವಾಗಿ ಕಾಲುಗಳನ್ನು ಹಿಡಿದುಕೊಂಡು ಮೇಲಕ್ಕೇಳಬೇಕು.

ಈ ಆಸನವನ್ನು ಜಾಗರೂಕತೆಯಿಂದ, ಒಮ್ಮೆ ಗುರುಮುಖೇನ ಕಲಿತು ಮಾಡಿದರೆ ಒಳ್ಳೆಯದು. ಒಮ್ಮೆ ಅಭ್ಯಾಸವಾದರೆ ಎರಡು-ಮೂರು ಬಾರಿ ಮಾಡಬಹುದು. ಪರ್ಯಂಕಾಸನ ಮಾಡಿದ ನಂತರ ಕಾಲುಗಳನ್ನು ಚಾಚಿ ಕುಳಿತು ವಿಶ್ರಮಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net