

ಮಡಿಕೇರಿ: ಗಾಂಧೀಜಿ ಅನುಯಾಯಿಯಾಗುವುದು ಸುಲಭವಲ್ಲದ ದಿನಗಳಲ್ಲಿ ಗಾಂಧೀಜಿ ತತ್ವಾದರ್ಶಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿಸಿ ಸರಳವಾಗಿ, ಆದರ್ಶಪ್ರಾಯವಾಗಿ ಬದುಕಿದ ಹಿರಿಮೆ ಕೂತಂಡ ಪಾರ್ವತಿ ಪೂವಯ್ಯರವರಿಗೆ ಸಲ್ಲಬೇಕೆಂದು ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಅಭಿಪ್ರಾಯಪಟ್ಟರು.
ನಗರದ ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಆಯೋಜಿತ ಕೂತಂಡ ಪಾರ್ವತಿ ಪೂವಯ್ಯರವರ ಕುರಿತಾದ ಅವ್ವ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಕೆ.ಬಿ.ಗಣಪತಿ, ಪಂದ್ಯಂಡ ಗಣಪತಿಯವರು ಅಂದಿನ ಕಾಲದಲ್ಲಿ ಕೊಡಗಿನ ಗಾಂಧಿ ಎಂದು ಖ್ಯಾತರಾಗಿದ್ದರೆ ಕೂತಂಡ ಪೂರ್ವತಿ ಪೂವಯ್ಯರವರು ಕೊಡಗಿನ ಸರೋಜಿನಿ ನಾಯ್ದು ಎಂದು ಹೆಸರುವಾಸಿಯಾಗಿದ್ದರು ಎಂದು ಸ್ಮರಿಸಿಕೊಂಡರು.
ಕೂತಂಡ ಪಾರ್ವತಿರವರನ್ನು ಪ್ರತ್ಯಕ್ಷ ಕಂಡವರು ಕೆಲವೇ ಕೆಲವರಾದರೂ ಪಾರ್ವತಿರವರ ಜೀವನಾದರ್ಶಗಳನ್ನು ಅರಿತವರು ಅನೇಕರಿದ್ದಾರೆ. ತನ್ನ ಬರವಣಿಗೆ ಮೂಲಕ ಕೊಡವರಂಥ ಸಣ್ಣ ಸಮುದಾಯವನ್ನು ಭಾರತಾದ್ಯಂತ ಪ್ರಚುರಪಡಿಸಿದ ಕೀರ್ತಿ ಅಂದಿನ ಕಾಲದ ಅಗ್ರ ಮಹಿಳಾ ಲೇಖಕಿಯಾಗಿದ್ದ ಪಾರ್ವತಿ ಪೂವಯ್ಯನವರಿಗೆ ಸಲ್ಲುತ್ತದೆ ಎಂದು ಗಣಪತಿ ಶ್ಲಾಘಿಸಿದರು.
ಕೊಡವ, ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಹಿಡಿತ ಹೊಂದುವ ಮೂಲಕ ಅಂದಿನ ಕಾಲಘಟ್ಟದಲ್ಲಿಯೇ ಕೊಡಗಿನ ಪ್ರಥಮ ಮಹಿಳಾ ಲೇಖಕಿಯಾಗಿ ಪಾರ್ವತಿ ಪೂವಯ್ಯ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಸಾಹಿತಿಯಾದಂತೆಯೇ ಜೀವನದಲ್ಲಿಯೂ ತನ್ನದೇ ಆದರ್ಶ ಹೊಂದಿದ್ದ ಪಾರ್ವತಿ ಓರ್ವ ಮಾದರಿ ತಾಯಿ ಕೂಡ ಆಗಿ ಕುಟುಂಬವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದದ್ದೂ ಹೆಗ್ಗಳಿಕೆಯಾಗಿದೆ ಎಂದೂ ಗಣಪತಿ ಹೇಳಿದರು.
ಮಡಿಕೇರಿಯ ಹಿರಿಯ ವೈದ್ಯ ಡಾ.ಎಂ.ಜಿ.ಪಾಟ್ಕರ್ ಮಾತನಾಡಿ, ಅವ್ವ ಎಂಬುದು ಸರಳ ಶಬ್ದವಾಗಿದ್ದರೂ ಅವ್ವ ಪದ ನೀಡುವ ಅರ್ಥ ವಿಶಾಲವಾದದ್ದು. ಕೂತಂಡ ಪಾರ್ವತಿ ಪೂವಯ್ಯರವರು ಜೀವಿಸಿದ್ದ ಕಾಲದಲ್ಲಿ ಭಾರತ ಅತ್ಯಂತ ಸಂಕಷ್ಟದ ದಿನಗಳನ್ನು ಕಂಡಿತ್ತು. ಬಡತನ ಎಲ್ಲಾ ಕಡೆ ತಾಂಡವವಾಡಿತ್ತು. ಇಂಥ ದಿನಗಳಲ್ಲಿಯೂ ಸಾಹಿತ್ಯ ಶ್ರೀಮಂತಿಕೆ ಮೆರೆದವರು ಪಾರ್ವತಿಯಾಗಿದ್ದರು ಎಂದು ಹೇಳಿದರು.
ಪ್ರಕತ್ತಿ ನಾಶ ಇಂದಿನ ಸಮಾಜದ ಮುಂದಿರುವ ಬಹಳ ದೊಡ್ಡ ಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಡಾ.ಪಾಟ್ಕರ್, ನಿಸರ್ಗದ ನಾಶದೊಂದಿಗೆ ಮನುಷ್ಯತ್ವ, ಮಾನವೀಯತೆಯೆ ನಾಶ ಕೂಡ ಉಂಟಾಗುತ್ತದೆ ಎಂದೂ ಎಚ್ಚರಿಸಿದರು.
ಅವ್ವ ಕೃತಿಯ ಲೇಖಕಿ ಡಾ.ನಯನ ಕಶ್ಯಪ್ ಮಾತನಾಡಿ, ಪೂರ್ವತಿ ಪೂವಯ್ಯರವರ ಜೀವನ ಮತ್ತು ಲೇಖನ ಎರಡೂ ಸರಳವಾಗಿತ್ತು. ಹೀಗಾಗಿಯೇ ಅವರು ಜನಮಾನಸದಲ್ಲಿ ಸ್ಮರಣೀಯವಾಗಿ ಉಳಿದರು ಎಂದರಲ್ಲದೇ, ಆ ಕಾಲದ ಆಶೋತ್ತರಳನ್ನು ಅರ್ಥ ಮಾಡಿಕೊಂಡು ಲೇಖನಗಳನ್ನು ಬರೆದದ್ದು ಕೂತಂಡ ಪಾರ್ವತಿ ಪೂವಯ್ಯ ಅವರ ಹೆಗ್ಗಳಿಕೆಯಾಗಿದೆ. ಸಾಹಿತ್ಯ ಎಂದಿಗೂ ಘನಗಾಂಭೀರ್ಯದಿಂದ ಕೂಡಿರಬೇಕಾಗಿಲ್ಲ. ಸರಳ ರೂಪದಲ್ಲಿಯೂ ಓದುಗನನ್ನು ಚಿಂತನೆಗೆ ಒಳಪಡಿಸುವುದೇ ನಿಜವಾದ ಸಾಹಿತ್ಯ ಎಂದು ನಯನ ಹೇಳಿದರು.
ತನ್ನ ತಾಯಿ ಪಾರ್ವತಿ ಕುರಿತಂತೆ ಕೂತಂಡ ಉತ್ತಪ್ಪ ಕೆಲವೊಂದು ನೆನಪುಗಳನ್ನು ಸಭಿಕರ ಮುಂದಿಟ್ಟರು. ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಸಭೆಯಲ್ಲಿ ಮಾತನಾಡಿದರು ದೀಪಿಕಾ ಅಪ್ಪಯ್ಯ ನಿರೂಪಿಸಿ, ಬಾಲಾಜಿ ಕಶ್ಯಪ್ ವಂದಿಸಿದರು.
ಈಗಿನ ಕವಿತೆಗಳಲ್ಲಿ ಮೌಲ್ಯ ಕುಸಿಯುತ್ತಿದೆ. ತೋಚಿದ್ದು ಗೀಚಿದಂತೆ ಕಂಡು ಬರುತ್ತಿದೆ. ಹೀಗಾಗಿಯೇ ಅರ್ಥಹೀನ ಕವಿತೆಗಳು ಹೆಚ್ಚಾಗುತ್ತಿದೆ. ಹೀಗಿರುವಾಗ ಅಂದಿನ ಕಾಲಮಾನದಲ್ಲಿಯೇ ಮೌಲ್ಯ, ಸತ್ವಯುತ ಕವನ, ಲೇಖನಗಳನ್ನು ಬರೆದ ಕೂತಂಡ ಪಾರ್ವತಿ ಪೂವಯ್ಯ ಸದಾ ಆದರ್ಶಪ್ರಾಯರಾಗುತ್ತಾರೆ.
-ಡಾ.ಎಂ.ಜಿ.ಪಾಟ್ಕರ್, ಹಿರಿಯ ವೈದ್ಯರು, ಮಡಿಕೇರಿ