

ಬೆಂಗಳೂರು: ಪ್ರಾಚೀನ ಕಾಲದಲ್ಲೇ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಗಳ ಬಗ್ಗೆ ತಿಳಿದಿದ್ದ ಭಾರತದ ಆರೋಗ್ಯ ಪದ್ಧತಿ ಇಡೀ ಜಗತ್ತಿಗೆ ಮಾದರಿ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.
ಎಂ.ಎಸ್.ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಮತ್ತು ನ್ಯೂಯಾರ್ಕ್‌ನ ಪ್ರತಿಷ್ಠಿತ ಮೌಂಟ್ ಸಿನೈ ಹೆಲ್ತ್ ಸಿಸ್ಟ್‌ಮ್ ಸಹಭಾಗಿತ್ವ ಒಪ್ಪಂದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಯೋಗ, ಧ್ಯಾನ ಮತ್ತು ಆಯುರ್ವೇದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮುಂಜಾಗ್ರತಾ ಕ್ರಮವಾಗಿದ್ದು, ಇಡೀ ವಿಶ್ವವೇ ಇದನ್ನು ಒಪ್ಪಿಕೊಂಡಿದೆ. ಸುಶ್ರುತಾಚಾರ್ಯರು ಶಲ್ಯತಂತ್ರದ ಮೂಲಕ ಶಸಚಿಕಿತ್ಸೆ ಮಾಡುತ್ತಿದ್ದರು. ಆ ಪರಂಪರೆಯ ಮುಂದುವರೆದ ಭಾಗವಾಗಿ ಆಧುನಿಕ ಚಿಕಿತ್ಸಾ ವಿಧಾನದಲ್ಲೂ ಬಹುದೊಡ್ಡ ಸಾಧನೆ ಮಾಡಿದೆ. ಕೋವಿಡ್19ನ್ನು ಭಾರತವು ನಿರ್ವಹಣೆ ಮಾಡಿದ ವಿಧಾನ, ವ್ಯಾಕ್ಸಿನೇಷನ್ ಸಲತೆ ಹಾಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಕ್ಸಿನ್ ಪೂರೈಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಒಂದು ಭೂಮಿ, ಒಂದು ಕುಟುಂಬ, ಒಂದು ಹೆಲ್ತ್ ಕೇರ್ ಎಂಬ ಪರಿಕಲ್ಪನೆಯಂತೆ, ಪ್ರಧಾನಿ ಮೋದಿ ಆರಂಭಿಸಿರುವ ಆಯುಷ್ಮಾನ್ ಭಾರತ್ ಜಗತ್ತಿನ ಬಹುದೊಡ್ಡ ಆರೋಗ್ಯ ಯೋಜನೆಯಾಗಿದೆ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸ್ಥಾಪನೆ, ಸ್ವಚ್ಛ ಭಾರತ ಅಭಿಯಾನಗಳು ಆರೋಗ್ಯ ಕ್ಷೇತ್ರದ ಮೈಲುಗಲ್ಲುಗಳಾಗಿವೆ ಎಂದು ವಿವರಿಸಿದರು.
ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಎಂ.ಎಸ್.ರಾಮಯ್ಯ ಹಾಸ್ಪಿಟಲ್ ಜಗತ್ತಿನ ಪ್ರತಿಷ್ಠಿತ ಮೌಂಟ್ ಸಿನೈ ಆಸ್ಪತ್ರೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಎರಡು ದೇಶಗಳ ಮೆಡಿಕಲ್ ನಾಲೆಡ್ಜ್ ವಿನಿಮಯಕ್ಕೆ ಮತ್ತು ಸಂಶೋಧನೆಗೆ ಬಹಳ ಅನುಕೂಲವಾಗಿದೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಹೇಳಿದರು.
ಸಮಾರಂಭದಲ್ಲಿ ಉಭಯ ಆಸ್ಪತ್ರೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು. ನಂತರ ಎರಡೂ ಆಸ್ಪತ್ರೆಗಳ ನಡುವಿನ ಸಹಭಾಗಿತ್ವದ ನೂತನ ಲೋಗೋ ಲಾಂಚ್ ಮಾಡಲಾಯಿತು.
ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಗೋಕುಲ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಎಂ.ಎಆರ್.ಜಯರಾಮ್, ಮೌಂಟ್ ಸಿನೈ ಗ್ರೂಪ್ ಮುಖ್ಯಸ್ಥರಾದ ಡಾ.ಝಾಬಿ ಡೊರೊಟೊವಿಕ್ಸ್, ಡಾ. ಡೇವಿಡ್ ಎಲ್.ರೀಚ್, ಗೋಕುಲ ಶಿಕ್ಷಣ ಸಂಸ್ಥೆಯ ಎಂ.ಆರ್.ಶ್ರೀನಿವಾಸ ಮೂರ್ತಿ, ಸಿ.ಎನ್.ನಾಗೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
-ಎಂ.ಆರ್. ಜಯರಾಮ್, ಜಿಇಎಫ್ ಚೇರಮನ್
-ಡಾ.ಝಾಬಿ ಡೊರೊಟೊವಿಕ್ಸ್, ಮೌಂಟ್ ಸಿನೈ ಅಧ್ಯಕ್ಷ
- ದಿನೇಶ ಗುಂಡೂರಾವ್, ಆರೋಗ್ಯ ಸಚಿವ