

ಪ್ಯಾರಿಸ್: ಫ್ರಾನ್ಸ್‌ನ ಅತ್ಯಂತ ಜನನಿಬಿಡ ರೈಲು ನಿಲ್ದಾಣಕ್ಕೆ ಹೋಗುವ ಹಳಿಗಳಲ್ಲಿ ಎರಡನೇ ಮಹಾಯುದ್ಧದ ಬಾಂಬ್ ಪತ್ತೆಯಾಗಿದ್ದು(World War II Bomb Found), ಪ್ಯಾರಿಸ್‌ನ ಗ್ಯಾರೆ ಡು ನಾರ್ಡ್ ರೈಲು ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಾಂಬ್ ಪತ್ತೆಯಾದ ಬಳಿಕ ಹಲವಾರು ರೈಲುಗಳ ಸ್ಥಗಿತ ಉಂಟಾಗಿ ಒಳಬರುವ ಮತ್ತು ಹೊರಹೋಗುವ ಸೇವೆಗಳ ಮೇಲೆ ಪರಿಣಾಮ ಬೀರಿತು. ಗ್ಯಾರ್ ಡು ನಾರ್ಡ್ ಒಂದು ಪ್ರಮುಖ ಯುರೋಪಿಯನ್ ಸಾರಿಗೆ ಕೇಂದ್ರವಾಗಿದ್ದು, ಫ್ರಾನ್ಸ್‌ನ ಉತ್ತರದ ಅಂತಾರಾಷ್ಟ್ರೀಯ ತಾಣಗಳಾದ ಬ್ರಸೆಲ್ಸ್ ಮತ್ತು ನೆದರ್‌ಲ್ಯಾಂಡ್ಸ್‌ಗೆ ಹಾಗೂ ಮುಖ್ಯ ಪ್ಯಾರಿಸ್ ವಿಮಾನ ನಿಲ್ದಾಣ ಮತ್ತು ಅನೇಕ ಪ್ರಾದೇಶಿಕ ತಾಣಗಳಿಗೆ ಸಂಪರ್ಕ ಸಾಧಿಸುತ್ತದೆ.
ಸೇಂಟ್ ಡೆನಿಸ್ ಉಪನಗರದ ಪ್ರದೇಶದಲ್ಲಿ ರಾತ್ರಿಯಿಡೀ ನಡೆಸಲಾದ ನಿರ್ವಹಣಾ ಕಾರ್ಯದ ಸಮಯದಲ್ಲಿ ಸ್ಫೋಟಗೊಳ್ಳದ ಬಾಂಬ್ ಹಳಿಗಳ ಮಧ್ಯದಲ್ಲಿ ಕಂಡುಬಂದಿದೆ ಎಂದು ರಾಷ್ಟ್ರೀಯ SNCF ರೈಲು ಕಂಪನಿ ತಿಳಿಸಿದೆ. ಪ್ಯಾರಿಸ್ ಪೊಲೀಸರು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಕೆಲಸ ಮಾಡುತ್ತಿದ್ದರಿಂದ ಯೂರೋಸ್ಟಾರ್ ರೈಲುಗಳು ಹಾಗೂ ಹೈ-ಸ್ಪೀಡ್ ಮತ್ತು ಸ್ಥಳೀಯ ಸೇವೆಗಳನ್ನು ಹೊಂದಿರುವ ರೈಲು ನಿಲ್ದಾಣದ ಎಲ್ಲಾ ಸಂಚಾರವನ್ನು ಸ್ಥಗಿತಗೊಳಿಸಿದರು. ಇದು ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದ್ದು ಪ್ರತಿದಿನ ಅಂದಾಜು 7,00,000 ಜನರಿಗೆ ಸೇವೆ ಸಲ್ಲಿಸುತ್ತಿದೆ.
ಬಾಂಬ್‌ನ ಮೂಲವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ ಆದರೂ ಎರಡನೇ ಮಹಾಯುದ್ಧದ ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳು ಯುರೋಪಿನಲ್ಲಿ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯಗಳ ಸಮಯದಲ್ಲಿ ಸಾಂದರ್ಭಿಕವಾಗಿ ಪತ್ತೆಯಾಗಿವೆ. ದಿನವಿಡೀ ಸಂಚಾರ ಅಸ್ತವ್ಯಸ್ತತೆ ಉಂಟಾಗಲಿದೆ. ಮಧ್ಯಾಹ್ನ ಸೀಮಿತ ಸೇವೆ ಮಾತ್ರ ಪುನರಾರಂಭಗೊಳ್ಳುತ್ತದೆ ಮತ್ತು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುವಂತೆ ಫ್ರೆಂಚ್ ಸಾರಿಗೆ ಸಚಿವ ಫಿಲಿಪ್ ಟ್ಯಾಬರೋಟ್ ಮನವಿ ಮಾಡಿದರು. ಮೊದಲನೇ ಅಥವಾ ಎರಡನೇ ಮಹಾಯುದ್ಧದ ಸಮಯದಲ್ಲಿ ಉಳಿದಿರುವ ಬಾಂಬ್‌ಗಳು ಫ್ರಾನ್ಸ್‌ನಾದ್ಯಂತ ನಿಯಮಿತವಾಗಿ ಪತ್ತೆಯಾಗುತ್ತಿವೆ. ಆದರೆ ಅಂತಹ ಜನದಟ್ಟಣೆಯ ಸ್ಥಳದಲ್ಲಿ ಅವುಗಳನ್ನು ಕಂಡುಹಿಡಿಯುವುದು ಬಹಳ ಅಪರೂಪ.(ಏಜೆನ್ಸೀಸ್)